ಬೆಂಗಳೂರು: ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವಿನೂತನವಾಗಿ ಸ್ಥಾಪಿಸಲಾಗಿರುವ ‘ಲೀಚೆಟ್ ಟ್ರೀಟ್‌ಮೆಂಟ್ ಪ್ಲಾಂಟ್’ಗೆ ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಭೇಟಿ ನೀಡಿ ಪರಿಶೀಲಿಸಿದರು.
ತ್ಯಾಜ್ಯದಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಪರಿಶುದ್ಧ್ ವೆಂಚರ್ಸ್ ಸಂಸ್ಥೆ ಘಟಕ ಸ್ಥಾಪಿಸಿದೆ. ಅದು ಇನ್ನೂ ಕಾರ್ಯಾರಂಭ ಮಾಡಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರಾಕ್ಷೇಪಣಾ ಪತ್ರ ನೀಡಿದ ಬಳಿಕ ಸಂಸ್ಕರಣಾ ಘಟಕ ಪ್ರಾರಂಭಿಸಲಾಗುವುದು ಎಂದು ಜಯರಾಮ್ ರಾಯಪುರ ಮಾಹಿತಿ ನೀಡಿದರು.
ನಿತ್ಯ 50 ಸಾವಿರ ಲೀಟರ್ ತ್ಯಾಜ್ಯ ನೀರು ಸಂಸ್ಕರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಅದರಿಂದ 30 ಸಾವಿರ ಲೀಟರ್ ಶುದ್ಧ ನೀರು ಉತ್ಪತ್ತಿಯಾಗಲಿದೆ. ಲೀಚೆಟ್ ಪ್ಲಾಂಟ್ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ನಂತರ ಸಂಸ್ಕರಿಸಿ ಸಿಗುವ ಶುದ್ಧ ನೀರನ್ನು ರೈತರು ಅಥವಾ ಕಟ್ಟಡ ನಿರ್ಮಾಣ ಮಾಡುವವರಿಗೆ ಉಚಿತವಾಗಿ ನೀಡಲಾಗುವುದು ಎಂದರು.
ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿತ್ಯ 300 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಸದ್ಯ ಸರಾಸರಿ 280 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಸಂಸ್ಕರಣಾ ಘಟಕದಲ್ಲಿ ದುರಸ್ತಿಯಿರುವ ಯಂತ್ರಗಳನ್ನು ಕೂಡಲೇ ಸರಿಪಡಿಸಬೇಕು. ಎಲ್ಲ ಕಡೆ ಎಲ್‌ಇಡಿ ದೀಪಗಳನ್ನು ಅಳವಡಿಸಿ ದಿನದ 24 ಗಂಟೆಯೂ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುವಂತೆ ಮಾಡಬೇಕು. ಪಾಲಿಕೆಯ ಮಾದರಿ ತ್ಯಾಜ್ಯ ಸಂಸ್ಕರಣಾ ಘಟಕವನ್ನಾಗಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕದ ಬಗ್ಗೆ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಾರದ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಭೇಟಿ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ವಲಯ ಜಂಟಿ ಆಯುಕ್ತ ಡಾ. ಕೆ. ಜಗದೀಶ್ ನಾಯ್ಕ್, ವಲಯ ಮುಖ್ಯ ಎಂಜಿನಿಯರ್ ರಾಜೇಶ್, ಸಂಸ್ಕರಣಾ ಘಟಕದ ವ್ಯವಸ್ಥಾಪಕಿ ಅರ್ಪಿತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.