ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ ತನಕ ನಗರಕ್ಕೆ ಸಿಕ್ಕೀತು ಕೆಆರ್‌ಎಸ್‌ ನೀರು!

ಕೆಆರ್‌ಎಸ್‌ನಲ್ಲಿರುವುದು ಕೇವಲ 9.34 ಟಿಎಂಸಿ ಅಡಿ ನೀರು
Last Updated 10 ಜುಲೈ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕೆಆರ್‌ಎಸ್‌ ಜಲಾಶಯನಲ್ಲಿ ಈಗಿರುವ ನೀರಿನ ಸಂಗ್ರಹದ ಪ್ರಕಾರ ನಗರಕ್ಕೆಅಬ್ಬಬ್ಬಾ ಎಂದರೆ ಸೆಪ್ಟೆಂಬರ್‌ವರೆಗೆ ಕುಡಿಯುವ ನೀರು ಪೂರೈಸಬಹುದು.

ನಗರಕ್ಕೆ ನೀರು ಪೂರೈಸುವ ಕೆಆರ್‌ಎಸ್‌ ಜಲಾಶಯದಲ್ಲಿ 9.34 ಟಿಎಂಸಿ ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30.12 ಟಿಎಂಸಿ ಅಡಿಗಳಷ್ಟು ನೀರು ಇತ್ತು.

‘ಜಲಾಶಯದಲ್ಲಿ ಈಗಿರುವ ನೀರನ್ನು ಬಳಸಿ ಆಗಸ್ಟ್‌ ಕೊನೆಯ ವಾರದವರೆಗೆ ನಗರದ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಸಾಧ್ಯ. ಜಲಾಶಯದ ನೀರನ್ನು ನೀರಾವರಿ ಕಾಲುವೆಗಳಿಗೆ ಅಥವಾ ತಮಿಳುನಾಡಿಗೆ ಹರಿಸದಿದ್ದರೆ ಸೆಪ್ಟೆಂಬರ್‌ವರೆಗೂ ನಗರದ ಜನರ ಕುಡಿಯುವ ನೀರಿನ ಬೇಡಿಕೆ ಈಡೇರಿಸಬಹುದು’ ಎಂದು ಜಲಮಂಡಳಿಯ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಸಿ. ಗಂಗಾಧರ್‌ ತಿಳಿಸಿದರು.

‘ಮುಂಗಾರು ತೀವ್ರಗೊಳ್ಳಬೇಕಾದ ಸಮಯವಿದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆ ಆಗದಿದ್ದರೆ ನಗರದ ಜನರು ಕುಡಿಯುವ ನೀರಿನ ವಿಚಾರದಲ್ಲಿ ಕಠಿಣ ದಿನಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಕೆಆರ್‌ಎಸ್‌ ಜಲಾಶಯಕ್ಕೆ ನೀರುಣಿಸುವ ಇತರ ಜಲಾಶಯಗಳ ನೀರಿನ ಒಳಹರಿವು ಬಹಳ ಕಡಿಮೆ ಇದೆ. ಜಲಮಂಡಳಿಯು ನಿತ್ಯ 145 ಕೋಟಿ ಲೀಟರ್‌ ಕಾವೇರಿ ನೀರನ್ನು ನಗರಕ್ಕೆ ಪೂರೈಸುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಷ್ಟೂ ನಗರದಲ್ಲಿ ನೀರಿನ ಬವಣೆ ಉಲ್ಬಣಿಸಲಿದೆ.

ಜಲಮಂಡಳಿ ಅಧಿಕಾರಿಗಳ ಪ್ರಕಾರ ಈ ಮಳೆಗಾಲದಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬಂದಿದೆ. ಮುಂದಿನ ದಿನಗಳಲ್ಲಾದರೂ ಉತ್ತಮ ಮಳೆಯಾಗಬಹುದು ಎಂಬ ಆಶಾವಾದವನ್ನು ಹೊಂದಿದ್ದಾರೆ.

‘ನಗರಕ್ಕೆ ಪೂರೈಸಲು ನಾವು ಕಾವೇರಿ ನೀರನ್ನೇ ನೆಚ್ಚಿಕೊಂಡಿದ್ದೇವೆ. ಮುಂಗಾರು ಕೈಕೊಟ್ಟರೆ ಹಾಗೂ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಎಣಿಸಿದಷ್ಟು ಪ್ರಮಾಣದಲ್ಲಿ ಒಳಹರಿವು ಇಲ್ಲದಿದ್ದರೆ ನಾವು ನಗರಕ್ಕೆ ನೀರು ಪೂರೈಸುವುದಾದರೂ ಹೇಗೆ? ನನಗೆ ಬಂದ ವರದಿಗಳ ಪ್ರಕಾರ ಕೆಆರ್‌ಎಸ್‌ಗೆ ಈ ಮಳೆಗಾಲದಲ್ಲಿ 3 ಟಿಎಂಸಿ ಅಡಿಗಳಷ್ಟು ನೀರು ಹರಿದು ಬಂದಿದೆ. ಈ ತಿಂಗಳಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ’ ಎಂದು ಗಂಗಾಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT