ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ ಇದೆ–ಆದರೆ, ಕೇಪ್‌ಟೌನ್‌ ಆಗಲಾರದು

Last Updated 31 ಅಕ್ಟೋಬರ್ 2019, 5:09 IST
ಅಕ್ಷರ ಗಾತ್ರ

ಬೆಂಗಳೂರು:‘ನಗರಕ್ಕೆ ನೀರಿನ ಕೊರತೆ ಇರುವುದು ನಿಜ. ಆದರೆ, ಬೆಂಗಳೂರನ್ನು ಮತ್ತೊಂದು ಕೇಪ್‌ಟೌನ್‌ ಆಗಲು ಬಿಡುವುದಿಲ್ಲ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹೇಳಿದರು.

‘ವ್ಯಕ್ತಿಯೊಬ್ಬರಿಗೆ ಸದ್ಯ ಲಭ್ಯವಿರುವ ನೀರು ಆಧರಿಸಿ, ಬಿಬಿಸಿಯವರು ಈ ವರದಿ ಸಿದ್ಧ ಮಾಡಿದ್ದಾರೆ. ಅಂತರ್ಜಲ ಪ್ರಮಾಣ ಶೂನ್ಯಕ್ಕೆ ಇಳಿಯುತ್ತದೆ ಎಂಬ ಈ ವರದಿಯನ್ನೇ ಎಲ್ಲರೂ ಉಲ್ಲೇಖಿಸುತ್ತಿದ್ದಾರೆ. ಆದರೆ, ನಗರದಲ್ಲಿನ ಅಂತರ್ಜಲ ಮಟ್ಟ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲದೆ, ಕಾವೇರಿ ಜಲಾನಯನ ಪ್ರದೇಶದಿಂದ ನಗರಕ್ಕೆ ಎಷ್ಟು ನೀರು ತರಲಾಗುತ್ತಿದೆ ಎಂಬ ಮಾಹಿತಿಯೂ ಈ ವರದಿ ಸಿದ್ಧಪಡಿಸಿದವರಿಗೆ ಇಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಐದನೇ ಹಂತದ ಯೋಜನೆಯಡಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಿಂದ ಹೆಚ್ಚುವರಿಯಾಗಿ 10 ಟಿಎಂಸಿ ಅಡಿ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. 2023ರ ವೇಳೆಗೆ ಈ ಕಾಮಗಾರಿ ಮುಗಿಯುತ್ತದೆ. 2030ರವರೆಗೆ ಈ ನೀರು ಸಾಕಾಗಬೇಕಾಗಿತ್ತು. ಆದರೆ, ನಗರದಲ್ಲಿನ ಜನಸಂಖ್ಯೆ ಮಿತಿ ಮೀರಿ ಹೆಚ್ಚುವುದರಿಂದ ಕೊರತೆ ಉಂಟಾಗಲಿದೆ’ ಎಂದರು.

‘ಈ ಕೊರತೆ ನೀಗಿಸಲು ಈಗಿನಿಂದಲೇ ಯೋಜನೆ ರೂಪಿಸಲಾಗುತ್ತಿದೆ. ಕಾವೇರಿಯಿಂದ ಅಲ್ಲದೆ, ಲಿಂಗನಮಕ್ಕಿ ಮತ್ತಿತರ ಕಡೆಗಳಿಂದ ನಗರಕ್ಕೆ ನೀರು ತರಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಖಾಸಗಿ ಎಸ್‌ಟಿಪಿಗಳ ನೀರಿನ ಬಳಕೆಗೂ ಕ್ರಮ ವಹಿಸಲಾಗುತ್ತದೆ. ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಕೇಪ್‌ಟೌನ್‌ ಆಗಲಿವೆಯೇ ಬೆಂಗಳೂರು, ಚೆನ್ನೈ!

ನವದೆಹಲಿ (ಪಿಟಿಐ): ಜಲ ಸಂರಕ್ಷಣಾಕಾಯಕವನ್ನು ಜವಾಬ್ದಾರಿಯಿಂದ ನಿರ್ವಹಿಸದಿದ್ದರೆ ಬೆಂಗಳೂರು ಮತ್ತು ಚೆನ್ನೈ ನಗರಗಳು ದಕ್ಷಿಣ ಆಫ್ರಿಕಾದ ‘ಕೇಪ್‌ಟೌನ್‌’ ನಂತಾಗಬೇಕಾಗುತ್ತದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಬುಧವಾರ ಎಚ್ಚರಿಸಿದರು.‌

2017–18ರಲ್ಲಿ ಕೇಪ್‌ಟೌನ್‌ ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗಿತ್ತು. ಬಳಿಕ ಜಲ ಸಂರಕ್ಷಣೆಗಾಗಿ ಕೈಗೊಂಡ ಜಾಗೃತಿ ಅಭಿಯಾನಗಳಿಂದ ಅಲ್ಲಿನ ಪರಿಸ್ಥಿತಿ ತಿಳಿಯಾಯಿತು. ಅಂಥ ಕೆಟ್ಟ ದಿನಗಳನ್ನು ದೇಶದ ನಗರಗಳು ಎದುರಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ತ್ವರಿತಗತಿಯ ನಗರೀಕರಣ, ಮಿತಿ ಮೀರಿದ ಜನಸಂಖ್ಯೆ, ಕಳಪೆ ಮಟ್ಟದ ಜಲ ನಿರ್ವಹಣೆ, ಕುಸಿದಿರುವ ಅಂತರ್ಜಲ ಮಟ್ಟ, ಮಲಿನಗೊಂಡಿರುವ ಕೆರೆಗಳಿಂದಾಗಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜತೆಗೆ ಇಲ್ಲಿನ ಜನರು ನೀರಿಗಾಗಿ ಟ್ಯಾಂಕರ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಚೆನ್ನೈ ನಗರದಲ್ಲಿಯೂ ಇದೆ ಎಂದು ಸಚಿವರು ಹೇಳಿದರು.

ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದಲ್ಲಿ ತಲಾ 1,540 ಕ್ಯೂಬಿಕ್‌ ಮೀಟರ್‌ನಷ್ಟು ನೀರಿನ ಅಗತ್ಯವಿತ್ತು. ಆದೀಗ ತಲಾ 5,000 ಕ್ಯೂಬಿಕ್‌ ಮೀಟರ್‌ಗೆ ಏರಿದೆ. ಇದೇ ಸ್ಥಿತಿ ದೇಶದಲ್ಲಿ ಮುಂದುವರೆದರೆ ಬೆಂಗಳೂರು, ಚೆನ್ನೈ ಮಾತ್ರವಲ್ಲ, ದೇಶದ ಬಹುತೇಕ ಭಾಗ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಜನರು ನೀರಿಗೆ ಪರಿತಪಿಸುವಂತಾಗುತ್ತದೆ’ ಎಂದು ಅವರು ತಿಳಿಸಿದರು.

‘ವಿಶ್ವದಲ್ಲಿಯೇ ಅತಿ ಹೆಚ್ಚು ಅಂತರ್ಜಲವನ್ನು ಅವಲಂಬಿಸಿರುವ ದೇಶ ಭಾರತ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಜನರು ನೈಸರ್ಗಿಕ ಸಂಪನ್ಮೂಲಗಳ ಪಾಲಕರಾಗಬೇಕೇ ಹೊರತು, ಮಾಲೀಕರಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT