ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣಿಗಳಿಗೆ ವಿಜ್ಞಾನ ಅರ್ಥಮಾಡಿಸಿ’

ಸುಸ್ಥಿರ ನೀರಿನ ಭವಿಷ್ಯ- ಅಂತರರಾಷ್ಟ್ರೀಯ ವಿಚಾರ ಸಂಕಿರಣ ಆರಂಭ
Last Updated 24 ಸೆಪ್ಟೆಂಬರ್ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರು, ಪರಿಸರವನ್ನು ಉಳಿಸಬೇಕೆಂದರೆ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನುರಾಜಕಾರಣಿಗಳಿಗೆ ಅರ್ಥ ಮಾಡಿಸಬೇಕು’ ಎಂದು ಸಂಸದ ರಾಜೀವ್ ಪ್ರತಾಪ್‌ ರೂಡಿ ಹೇಳುವುದರೊಂದಿಗೆ ಇಲ್ಲಿ ನಾಲ್ಕು ದಿನಗಳ ಸುಸ್ಥಿರ ನೀರಿನ ಭವಿಷ್ಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಆರಂಭವಾಯಿತು.

‘ರಾಜಕಾರಣಿಗಳು ಎಷ್ಟು ಸರಳವಾಗಿ, ಆಳವಾಗಿ ವಿಷಯ ತಿಳಿದುಕೊಳ್ಳುತ್ತಾರೋ, ಅಷ್ಟರ ಮಟ್ಟಿಗೆ ಪರಿಸರಕ್ಕೆ ಆಗುವ ಧಕ್ಕೆ ನಿವಾರಣೆಯಾಗುತ್ತದೆ. ದೇಶ, ವಿದೇಶಿ ವೇದಿಕೆಗಳಲ್ಲಿ ಅದನ್ನು ಬಿಂಬಿಸಿದರೆ ಸೂಕ್ತ ಕಾನೂನು ರೂಪುಗೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನಿಗಳು, ತಜ್ಞರು ತಮ್ಮ ಜ್ಞಾನವನ್ನು ಜನರಿಗೆ, ಜನನಾಯಕರಿಗೆ ಅರ್ಥ ಮಾಡಿಸಿದರೆ ಮಾತ್ರ ಅವರು ಕಂಡುಕೊಂಡ ಸಂಶೋಧನೆಗೆ ಒಂದಿಷ್ಟು ಫಲ ಮತ್ತು ಮನುಕುಲಕ್ಕೆ ಉಪಯೋಗ ಸಿಗಲು ಸಾಧ್ಯ’ ಎಂದು ರೂಡಿ ಪ್ರತಿಪಾದಿಸಿದರು.

‘ಸಂಸತ್‌ನಲ್ಲಿ 266 ಮಂದಿ ನೀರಿನ ಕೊರತೆ ಕುರಿತು ಚರ್ಚೆ ನಡೆಸಿದ್ದಾರೆ. ಒಂದೇ ವಿಷಯದ ಬಗ್ಗೆ ಇಷ್ಟು ಮಂದಿ ಚರ್ಚಿಸಿದ್ದು ವಿಶೇಷ. ಇದು ದೇಶದ ನೀರಿನ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದೆ’ ಎಂದರು.

ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ದೇವಿಚಾ ಸೆಂಟರ್‌ ಫಾರ್‌ ಕ್ಲೈಮೇಟ್‌ ಚೇಂಜ್‌, ಫ್ಯೂಚರ್‌ ಅರ್ಥ್‌ನಸಸ್ಟೈನೆಬಲ್‌ ವಾಟರ್ ಫ್ಯೂಚರ್‌ ಪ್ರೋಗ್ರಾಂ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ವಿಚಾರ ಸಂಕಿರಣ ವಿಜ್ಞಾನ ಮತ್ತು ರಾಜಕಾರಣಿಗಳ ನಡುವೆ ಸಂಪರ್ಕ ಸಾಧಿಸುವ ಪ್ರಯತ್ನದ ಒಂದು ಭಾಗದಂತೆ ಕಾಣಿಸಿತು. ಪರಿಸರ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಸಿಕ್ಕಿಂನ ಮಾಜಿ ಸಂಸದ ಪಿ. ಡಿ. ರೈ, ಬಾಂಗ್ಲಾದೇಶದ ಸಂಸದ ಸೈಯದ್‌ ಸಮದ್‌ ಸರ್ಕಾರ್‌ ಸಹ ವಿಚಾರ ಮಂಡಿಸಿದರು.

ಭವಿಷ್ಯದಲ್ಲಿ ನೀರಿನ ಲಭ್ಯತೆ, ಶುದ್ಧ ಕುಡಿಯುವ ನೀರು ದೊರಕುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸುತ್ತಿರುವ ಹಂಗರಿಯ ಪ್ರೊ. ಆಂಡ್ರಸ್‌ ಸೊಲ್ಲಾಝಿ ನಾಗಿ, ಸ್ವಿಟ್ಜರ್ಲೆಂಡ್‌ನ ಪ್ರೊ. ಓಲ್ಕೇ ಒನ್ವರ್‌, ಸಸ್ಟೈನೆಬಲ್‌ ವಾಟರ್ ಫ್ಯೂಚರ್‌ ಕಾರ್ಯಕ್ರಮದ ನಿರ್ದೇಶಕಪ್ರೊ. ಅನೀಕ್‌ ಭದೂರಿ, ಕೋಪನ್‌ಹೆಗನ್‌ನ ಹಾರ್ಟ್‌ವಿಗ್‌ ಕ್ರೆಮರ್‌, ಐಐಎಸ್‌ಸಿಯ ಇಂಟರ್‌ಡಿಸಿಪ್ಲನರಿ ಸೆಂಟರ್‌ ಫಾರ್‌ ವಾಟರ್‌ ರಿಸರ್ಚ್‌ನ ಅಧ್ಯಕ್ಷ ಡಾ. ಪ್ರದೀಪ್‌ ಮಜುಂದಾರ್‌, ‘ಎಟ್ರೀ’ ಸಂಸ್ಥೆಯ ಡಾ. ವೀಣಾ ಶ್ರೀನಿವಾಸನ್‌ ಸಹಿತ ಅಲವಾರು ವಿಷಯ ತಜ್ಞರು ಮೊದಲ ದಿನದ ಗೋಷ್ಠಿಗಳಲ್ಲಿ ಪಾಲ್ಗೊಂಡರು.

ಚಿಂತನೆಗೆ ಹಚ್ಚಿದ ರಾಷ್ಟ್ರೀಯ ಮೀನು
‘ರಾಷ್ಟ್ರೀಯ ಪ್ರಾಣಿ ಎಂದರೆ ಹುಲಿ ಎಂದು ಎಲ್ಲರಿಗೂ ಗೊತ್ತು. ರಾಷ್ಟ್ರೀಯ ಮೀನು ಎಂದರೆ ಯಾರಿಗೆ ಗೊತ್ತಿದೆ? ನಮ್ಮ ಈ ಅಜ್ಞಾನವೇ ನಮ್ಮ ಅಮೂಲ್ಯ ಪರಿಸರವನ್ನು ನಾಶಗೊಳಿಸುತ್ತದೆ’ ಎಂಬ ಸಂಸದ ರಾಜೀವ್‌ ಪ್ರತಾಪ್‌ ರೂಡಿ ಅವರ ಹೇಳಿಕೆ ವಿಜ್ಞಾನಿಗಳನ್ನು ಚಿಂತನೆಗೆ ಹಚ್ಚಿತು.

‘ನದಿ ನೀರಿನ ಡಾಲ್ಫಿನ್ ರಾಷ್ಟ್ರೀಯ ಮೀನು. ಗಂಗಾ ನದಿಯಲ್ಲಿ ಇಂತಹ 800 ಡಾಲ್ಫಿನ್‌ಗಳುಇರಬಹುದು. ಆದರೆ ಅವುಗಳ ಸಂಖ್ಯೆ ಕುಸಿಯುತ್ತಿದೆ. ಮೀನು ಸಂರಕ್ಷಣೆಯಂತಹ ಸಣ್ಣ ಪ್ರಯತ್ನವನ್ನು ಮೀನುಗಾರರು ಮಾಡುವುದು ಸಹ ಪರಿಸರ ಸಂರಕ್ಷಣೆಗೆ ನೀಡುವ ದೊಡ್ಡ ಕೊಡುಗೆ. ಇಂತಹ ಪ್ರಯತ್ನ ಎಲ್ಲ ಕ್ಷೇತ್ರಗಳಲ್ಲಿ ನಡೆಯಬೇಕು’ ಎಂದರು. ‘ನೇಪಾಳದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಇದರಿಂದ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಪ್ರವಾಹ ಸಹಿತ ಹಲವಾರು ಪ್ರಾಕೃತಿಕ ವಿಕೋಪಗಳು ಕಾಣಿಸಿವೆ’ ಎಂದರು.

**

ಹಂಗರಿಯ ಬುಡಾಪೇಸ್ಟ್‌ನಲ್ಲಿ ನಡೆಯುವ ನೀರಿನ ಭವಿಷ್ಯ ಕುರಿತ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆಯುತ್ತಿರುವ ಬೆಂಗಳೂರು ಘೋಷಣೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಿದೆ
-ಪ್ರೊ. ಅನುದಾಗ್‌ ಕುಮಾರ್‌,ಐಐಎಸ್‌ಸಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT