ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಪ್ಪಟ್ಟು ಬೆಲೆಗೆ ನೀರು ಮಾರಾಟ

ಕೆ.ಆರ್.ಪುರ, ಹೊರಮಾವು, ಕಲ್ಕೆರೆ, ರಾಮಮೂರ್ತಿ ನಗರದಲ್ಲಿ ಸಮಸ್ಯೆ l ಟ್ಯಾಂಕರ್‌ ನೀರಿಗೆ ಬೇಡಿಕೆ
Last Updated 12 ಮಾರ್ಚ್ 2020, 22:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವಲಯದ ಕೆ.ಆರ್.ಪುರ, ಕಲ್ಕೆರೆ, ಹೊರಮಾವು, ರಾಮಮೂರ್ತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕ್ಯಾನ್‌ಗಳಲ್ಲಿ ಹೆಚ್ಚು ಬೆಲೆಗೆ ಕುಡಿಯುವ ನೀರು ಮಾರಾಟ ಮಾಡುವ ಮೂಲಕ ಪರಿಸ್ಥಿತಿಯ ಲಾಭವನ್ನು ಕಿರಾಣಿ ಅಂಗಡಿಯವರು ಹಾಗೂ ಶಾಪಿಂಗ್‌ ಮಾಲ್‌ನವರು ಪಡೆದುಕೊಳ್ಳುತ್ತಿದ್ದಾರೆ.

ದಿನಸಿ, ತರಕಾರಿ ಮಾರುವ ರೀತಿಯಲ್ಲಿ ನೀರು ತುಂಬಿರುವ ಕ್ಯಾನ್‌ಗಳನ್ನು ಅಂಗಡಿಗಳ ಮುಂದೆ ಮಾರಾಟಕ್ಕೆ ಇಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹5ಕ್ಕೆ20 ಲೀಟರ್‌ ನೀರು ಸಿಗುತ್ತದೆ. ಆದರೆ, ಈ ಪ್ರದೇಶಗಳಲ್ಲಿ ಇಂತಹ ಘಟಕಗಳ ಕೊರತೆ ಇದೆ. ದೂರದ ಘಟಕಗಳಿಂದ ಕ್ಯಾನ್‌ಗಳಲ್ಲಿ ನೀರು ತರುತ್ತಿರುವ ಶಾಪಿಂಗ್‌ ಮಾಲ್‌ ಮತ್ತು ಕಿರಾಣಿ ಅಂಗಡಿಗಳ ಮಾಲೀಕರು, ₹30ರಿಂದ ₹40ರಂತೆ ಮಾರಾಟ ಮಾಡುತ್ತಿದ್ದಾರೆ.

‘ಕಲ್ಕೆರೆಯಲ್ಲಿ ಶುದ್ಧ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿ ಇತ್ತು. ₹10ಕ್ಕೆ 30 ಲೀಟರ್‌ ನೀರು ಕೊಡುತ್ತಿದ್ದರು. ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಅವರು ಕಂಪನಿ ಮುಚ್ಚಿದರು’ ಎಂದು ಕಲ್ಕೆರೆಯ ಮುನಿರಾಜು ಹೇಳಿದರು.

ಟ್ಯಾಂಕರ್‌ಗಳ ಓಡಾಟ: ಐದನೇ ಹಂತದಲ್ಲಿ ಕಾವೇರಿ ನೀರು ಪೂರೈಕೆಗಾಗಿ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆಯಲಾಗಿದೆ. ಸಂಪೂರ್ಣವಾಗಿ ಹದಗೆಟ್ಟಿರುವ ಈ ರಸ್ತೆಗಳಲ್ಲೂಟ್ಯಾಂಕರ್‌ಗಳ ಓಡಾಟವೂ ಜೋರಾಗಿದೆ. ಈ ಟ್ಯಾಂಕರ್‌ಗಳಲ್ಲಿ 5000 ಲೀಟರ್‌ ನೀರನ್ನು ₹750ರಿಂದ ₹800ರಂತೆ ಮಾರಾಟ ಮಾಡಲಾಗುತ್ತಿದೆ. ಎಚ್‌ಬಿಆರ್‌ ಲೇಔಟ್‌ನಿಂದ ಈ ಪ್ರದೇಶಗಳಿಗೆ ಟ್ಯಾಂಕರ್‌
ನಲ್ಲಿ ನೀರು ಪೂರೈಸಲಾಗುತ್ತಿದೆ.

‘ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಕಾವೇರಿ ನೀರು ಪೂರೈಸಲಾಗುತ್ತಿದೆ. ಸಣ್ಣದಾಗಿ ಬರುವ ಈ ನೀರಿನಲ್ಲಿ ದಿನಕ್ಕೆ ಐದಾರು ಕೊಡಗಳನ್ನೂ ತುಂಬಿಟ್ಟುಕೊಳ್ಳಲಾಗುತ್ತಿಲ್ಲ. ಕೊಳವೆ ಬಾವಿಗಳೆಲ್ಲ ಬತ್ತಿ ಹೋಗಿದ್ದು, ನಿತ್ಯದ ಬಳಕೆಗೂ ಹೆಚ್ಚು ನೀರು ಸಿಗುತ್ತಿಲ್ಲ’ ಎಂದು ರಾಮಮೂರ್ತಿನಗರ ನಿವಾಸಿ ರಮೇಶ್‌ ಹೇಳಿದರು.

‘ಇಲ್ಲದ ನೀರನ್ನು ಎಲ್ಲಿಂದ ಕೊಡೋಣ’
‘1500ರಿಂದ 1600 ಅಡಿಗಳವರೆಗೆ ಕೊರೆಸಿದರೂ ನೀರು ಬರುತ್ತಿಲ್ಲ. ನಮ್ಮ ವಾರ್ಡ್‌ನ ಹಲವು ಪ್ರದೇಶಗಳಿಗೆ ಕಾವೇರಿ ನೀರಿನ ಸಂಪರ್ಕವನ್ನೂ ನೀಡಿಲ್ಲ. ಶುದ್ಧ ಕುಡಿಯುವ ನೀರಿನ 11 ಘಟಕಗಳನ್ನು ಹಾಕಲಾಗಿತ್ತು. ಅದರಲ್ಲಿ ಕೆಲವು ನೀರಿಲ್ಲದೆ ಸ್ಥಗಿತಗೊಂಡಿವೆ. ಇಲ್ಲದ ನೀರನ್ನು ಎಲ್ಲಿಂದ ತರೋಣ’ ಎಂದು ಪ್ರಶ್ನಿಸುತ್ತಾರೆ ಹೊರಮಾವು ವಾರ್ಡ್‌ ಸದಸ್ಯೆ ರಾಧಮ್ಮ ವೆಂಕಟೇಶ.

‘ಬೇರೆ ಬೇರೆ ಕಡೆಗಳಲ್ಲಿ ಬೋರ್‌ವೆಲ್‌ ಕೊರೆಸಿದರೂ ನೀರು ಬರುತ್ತಿಲ್ಲ. ಊರೊಳಗೆ (ಕಲ್ಕೆರೆ) ಕೊಳವೆಬಾವಿ ಕೊರೆಸಿದರೆ ಉಪ್ಪು ನೀರು ಬರುತ್ತದೆ. ಊರಿನಿಂದ ಹೊರಗೆ ಮಾತ್ರ ಸಿಹಿ ನೀರು ಬರುತ್ತದೆ. ಹೆಚ್ಚು ಕೊಳವೆಬಾವಿ ಕೊರೆಸಲು ಅನುಮತಿ ಕೇಳುತ್ತಿದ್ದೇನೆ’ ಎಂದು ರಾಮಮೂರ್ತಿನಗರ ವಾರ್ಡ್‌ ಸದಸ್ಯೆ ಎಂ. ಪದ್ಮಾವತಿ ಶ್ರೀನಿವಾಸ್ ಹೇಳಿದರು.

‘ಹೊಸ ಪೈಪ್‌ಲೈನ್‌ ಅಳವಡಿಕೆ ಹೆಸರಲ್ಲಿ, ಈ ಮೊದಲು ನೀರು ಪೂರೈಕೆಯಾಗುತ್ತಿದ್ದ ಪೈಪ್‌ಗಳನ್ನೂ ಒಡೆದು ಹಾಕಿದ್ದಾರೆ. ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಯ್ತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

*
ಜಲಮಂಡಳಿ ನೀರಿನ ವ್ಯವಸ್ಥೆ ಮಾಡಿಲ್ಲ. ಹೊರಮಾವು ಗ್ರಾಮ ಪಂಚಾಯಿತಿಯಿಂದ ಪೂರೈಸಲಾಗುತ್ತಿರುವ ನೀರೇ ಆಧಾರವಾಗಿದೆ. ಕ್ಯಾನ್‌ ನೀರಿನ ದರವನ್ನೂ ಹೆಚ್ಚಿಸಲಾಗಿದೆ.
–ಆಂಜಿನಪ್ಪ, ಹೊರಮಾವು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT