ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಹಾಹಾಕಾರ: ಖಾಲಿ ಕೊಡ ಪ್ರದರ್ಶನ

ಉತ್ತರಹಳ್ಳಿ ವಾರ್ಡ್‌ನ ಯಾದಳ ನಗರದ ಜನರ ದಿನ ನಿತ್ಯದ ಪರಿಸ್ಥಿತಿಯಿದು
Last Updated 22 ಏಪ್ರಿಲ್ 2022, 5:17 IST
ಅಕ್ಷರ ಗಾತ್ರ

ಬೆಂಗಳೂರು: 20 ದಿನಗಳಿಗೊಮ್ಮೆ ಬರುವ ನೀರು, ಟ್ಯಾಂಕರ್‌ಗಳಲ್ಲಿ ನೀರು ಖರೀದಿಸಿ ಕುಡಿಯುವ ಅನಿವಾರ್ಯತೆ, ಬಡವರೇ ವಾಸಿಸುವ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ.

ಇದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿ ವಾರ್ಡ್‌ನ ಯಾದಳಂ ನಗರದ ಸ್ಥಿತಿ. ನೀರಿಗಾಗಿ ನಿತ್ಯ ಪರದಾಡುವ ನಿವಾಸಿಗಳು ಗುರುವಾರ ಖಾಲಿ ಕೊಡ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಕೂಲಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಗಾರ್ಮೆಂಟ್ಸ್ ಕಾರ್ಖಾನೆಗಳ ಕಾರ್ಮಿಕರು ಸೇರಿ ಬಹುತೇಕ ಬಡವರೇ ವಾಸ ಇರುವ ಬಡಾವಣೆ ಇದು. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗ ತೀವ್ರಗೊಂಡಿದೆ. ಟ್ಯಾಂಕರ್‌ಗಲ್ಲಿ ನಿವಾಸಿಗಳೇ ಹಣ ಕೊಟ್ಟು ನೀರು ತರಿಸಿಕೊಳ್ಳುತ್ತಿದ್ದಾರೆ. ‘ಒಂದು ಟ್ಯಾಂಕರ್‌ ನೀರಿಗೆ ₹700ರಿಂದ ₹800 ನೀಡಿ ಖರೀದಿಸಬೇಕಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಶಾಸಕ ಎಂ. ಕೃಷ್ಣಪ್ಪ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕ ಎಂ.ಕೃಷ್ಣಪ್ಪ ಅವರ ಮನೆಗೆ ಹೋಗಿ ಸಮಸ್ಯೆ ವಿವರಿಸಿದ್ದೇವೆ. ಆದರೂ ಪರಿಹಾರವಾಗಿಲ್ಲ. ತಿಂಗಳಿಗೆ ₹2,500 ಖರ್ಚು ಮಾಡಿ ನೀರು ಖರೀದಿಸಿ ಜೀವನ ಸಾಗಿಸುತ್ತಿದ್ದೇನೆ’ ಎಂದು ನಿವಾಸಿ ಪಟೇಲ್ ರವಿ ಹೇಳಿದರು.

‘ಕೆಲಸಕ್ಕೆ ಹೋಗದೆ ನೀರಿಗಾಗಿ ದಿನವಿಡೀ ಕಾದು ಕುಳಿತುಕೊಳ್ಳುತ್ತಿದ್ದೇವೆ. ನೀರಿಗಾಗಿ ಅಲೆದಾಡಿ ಸುಸ್ತಾಗಿದ್ದೇವೆ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತೇವೆ. ಅದಕ್ಕೂ ಮಣಿಯದಿದ್ದರೆ ಬಿಬಿಎಂಪಿ ಮತ್ತು ಜಲ ಮಂಡಳಿ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸುತ್ತೇವೆ’ ಎಂದುಲತಾ, ಲಕ್ಷ್ಮಮ್ಮ, ಸರೋಜಾ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಮಾತನಾಡಿ, ‘ಈ ಕ್ಷೇತ್ರದಿಂದ ಏಳು ಬಾರಿ ಬಿಜೆಪಿಯ ಶಾಸಕರೇ ಆಯ್ಕೆಯಾಗಿದ್ದಾರೆ. ಇಡೀ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ’ ಎಂದರು.

ಉತ್ತರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಮಾರ್, ಉತ್ತರಹಳ್ಳಿ ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಬೈರಪ್ಪ, ಕಾಂಗ್ರೆಸ್ ವಾರ್ಡ್‌ ಘಟಕದ ಅಧ್ಯಕ್ಷ ಗುಂಡುಮಣಿ ಶ್ರೀನಿವಾಸ್ , ಕಾಂಗ್ರೆಸ್ ಮುಖಂಡರಾದ ಕೆ.ಉಮಾದೇವಿ, ಕೆ.ಈಶ್ವರ್, ಬಾಲಕೃಷ್ಣ, ಯೋಗಾಸಿಂಹ, ಉತ್ತರಹಳ್ಳಿ ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್ ಪ್ರತಿಭಟನೆಗೆ ಸಾಥ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT