ಇನ್ನೂ ಬಿಡುಗಡೆಯಾಗಿಲ್ಲ ₹ 600 ಕೋಟಿ

7
ಜಲ ಸಂಪನ್ಮೂಲ ಇಲಾಖೆ: ಹೊರಗುತ್ತಿಗೆ ನೌಕರರಿಗೆ ಪಾವತಿಯಾಗದ ವೇತನ

ಇನ್ನೂ ಬಿಡುಗಡೆಯಾಗಿಲ್ಲ ₹ 600 ಕೋಟಿ

Published:
Updated:

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ ಅಧೀನದ ನಾಲ್ಕು ನಿಗಮಗಳಲ್ಲಿ ಐದು ತಿಂಗಳುಗಳಿಂದ ಗುತ್ತಿಗೆದಾರರ ಪಾವತಿ ಬಾಕಿ, ಹೊರ ಗುತ್ತಿಗೆ ನೌಕರರ ವೇತನ, ವಾಹನಗಳ ಇಂಧನ ಬಿಲ್ ಸೇರಿದಂತೆ ಇತರ ವೆಚ್ಚಗಳ ಸುಮಾರು ₹ 600 ಕೋಟಿ ಇನ್ನೂ ಬಿಡುಗಡೆ ಆಗಿಲ್ಲ!

ಖಜಾನೆ–2ರ ಮೂಲಕ ಈ ಮೊತ್ತ ಬಿಡುಗಡೆ ಆಗಬೇಕಿದೆ. ಆದರೆ, ಸಲ್ಲಿಕೆಯಾದ ಬಿಲ್‌ಗಳನ್ನು ಪರಿಶೀಲಿಸಿ ಖಜಾನೆಗೆ ಸಲ್ಲಿಸಬೇಕಾದ ಅಧಿಕಾರಿ (ಕಾರ್ಯಪಾಲಕ ಎಂಜಿನಿಯರ್‌– ಇಇ) ಮೂರು ತಿಂಗಳ ಹಿಂದೆ ನಿವೃತ್ತರಾಗಿದ್ದಾರೆ. ಅವರ ಅಧಿಕಾರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಬೇರೆ ಅಧಿಕಾರಿಗೆ ವರ್ಗಾಯಿಸದೇ ಇರುವುದೇ ಸಮಸ್ಯೆಗೆ ಕಾರಣ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ.

ಬಿಲ್‌ಗಳ ಮಂಜೂರಾತಿ ಹೊಣೆಯನ್ನು ಕಾರ್ಯಪಾಲಕ ಎಂಜಿನಿಯರ್‌ ಅನುಪಸ್ಥಿತಿಯಲ್ಲಿ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ (ಎಇಇ) ನಿಭಾಯಿಸುತ್ತಾರೆ. ಆದರೆ, ಹುದ್ದೆಯನ್ನು ನಿಮ್ನೀಕರಿಸಿ (ಇಇಯಿಂದ ಎಇಇ ಆಗಿ ಡೌನ್‌ ಗ್ರೇಡ್‌) ಅಧಿಕಾರ ವರ್ಗಾಯಿಸದೇ ಇರುವುದರಿಂದ ಖಜಾನೆ–2ಗೆ ಬಿಲ್‌ಗಳನ್ನು ಸಲ್ಲಿಸಲು ಅಧಿಕಾರಿಗೆ ಅವಕಾಶ ಇಲ್ಲ. ಹುದ್ದೆ ನಿಮ್ನೀಕರಿಸುವ ಸಂಬಂಧ ಕಡತ ಡಿಪಿಎಆರ್‌ನಲ್ಲಿ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ ಎಂದೂ ಮೂಲಗಳು ತಿಳಿಸಿವೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರ ಸುಮಾರು ₹ 500 ಕೋಟಿ ಬಿಡುಗಡೆಗೆ ಬಾಕಿ ಇದೆ. ಹಣ ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ನಿಗಮ ಗಳ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗಳನ್ನು ಸುತ್ತುತ್ತಿದ್ದಾರೆ. ಆದರೆ, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಹಣ ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿಯೇ ತಡೆಹಿಡಿಯಲಾಗಿದೆ ಎಂದು ಗುತ್ತಿಗೆದಾರರೊಬ್ಬರು ದೂರಿದರು.

‘ಇಲಾಖೆಯ ವಿವಿಧ ಕಚೇರಿಗಳಲ್ಲಿ ಕನಿಷ್ಠ ವೇತನದಡಿ ಕೆಲಸ ಮಾಡುವ ಕಂಪ್ಯೂಟರ್‌ ಆಪರೇಟರ್‌ಗಳು, ಬೆರಳಚ್ಚುಗಾರರು, ಚಾಲಕರು, ಸರ್ವೇಯರ್‌ಗಳೂ ವೇತನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ಹೊರಗುತ್ತಿಗೆ ನೌಕರರೊಬ್ಬರು ಬೇಸರ ವ್ಯಕ್ತಪಡಿಸಿದರು.

***

ಬಿಲ್‌ಗಳು ಪಾವತಿ ಆಗದಿರಲು ಕೆಲವೊಂದು ತಾಂತ್ರಿಕ ಸಮಸ್ಯೆ ಕಾರಣವಾಗಿದೆ. ಮುಂದಿನ ವಾರ ಹಣ ಬಿಡುಗಡೆಯಾಗಲಿದೆ

-ರಾಕೇಶ್‌ ಸಿಂಗ್‌,ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !