ಶುಕ್ರವಾರ, ಏಪ್ರಿಲ್ 3, 2020
19 °C
ಶಾಸಕ ಅರವಿಂದ ಲಿಂಬಾವಳಿ ಮಧ್ಯಸ್ಥಿಕೆ

ಮುಷ್ಕರ ಹಿಂಪಡೆದ ಟ್ಯಾಂಕರ್ ಮಾಲೀಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೀರು ಸರಬರಾಜು ನಿಲ್ಲಿಸಿ ಟ್ಯಾಂಕರ್ ಲಾರಿ ಮಾಲೀಕರು ಮತ್ತು ಬೋರ್‌ವೆಲ್ ಮಾಲೀಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ಹಿಂಪಡೆದರು.

ಹೊಸಕೋಟೆಯ ಮೂರು ಗ್ರಾಮಗಳಿಂದ ಈ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿತ್ತು. ಇಲ್ಲಿನ ಕೊಳವೆಬಾವಿಗಳಿಂದ ನೀರು ಸಾಗಿಸಲು ತಹಶೀಲ್ದಾರ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರಿಂದ ಮಾಲೀಕರು ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು.

‘ತಹಶೀಲ್ದಾರ್ ಹೇರಿರುವ ನಿರ್ಬಂಧ ಹಿಂಪಡೆಯಬೇಕು. ಬೆಸ್ಕಾಂ ಅಧಿಕಾರಿಗಳು ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನೀರು ಸರಬರಾಜು ಬೋರ್‌ವೆಲ್‌ಗಳಿಗೆ ಅಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಬೇಕು. ಟ್ಯಾಂಕರ್ ಚಾಲಕರಿಗೆ ಪುಂಡರು ನೀಡುವ ಕಿರುಕುಳ ತಪ್ಪಬೇಕು ಎಂಬುದು ನಮ್ಮ ಬೇಡಿಕೆಗಳು. ಶಾಸಕ ಅರವಿಂದ ಲಿಂಬಾವಳಿ ಮಾತುಕತೆ ನಡೆಸಿದ್ದಾರೆ. ನಮ್ಮ ಬೇಡಿಕೆಗಳನ್ನು ಮೂರು ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ’ ಎಂದು ಬೆಂಗಳೂರು ಪೂರ್ವ ಖಾಸಗಿ ನೀರು ಸರಬರಾಜುದಾರರ ಸಂಘದ ಅಧ್ಯಕ್ಷ ಆರ್‌.ವಿ.ಎನ್. ಬಾಬು ತಿಳಿಸಿದರು.

‘ಮುಷ್ಕರ ನಡೆಯುತ್ತಿದ್ದ ಸಂದರ್ಭವನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದು, ಒಂದು ಟ್ಯಾಂಕರ್ ನೀರಿಗೆ ₹ 1 ಸಾವಿರದ ಬದಲು ₹5 ಸಾವಿರ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ಸಾರ್ವಜನಿಕರಿಂದ ಆಗುವ ಸುಲಿಗೆ ತಪ್ಪಿಸಬೇಕಿದೆ. ನೀರಿಲ್ಲದೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ತೊಂದರೆ ಉಂಟಾಗಿದೆ. ಇದನ್ನು ಗಮನಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)