ಗುರುವಾರ , ಜೂನ್ 17, 2021
29 °C
ಸಫಾಯಿ ಕರ್ಮಚಾರಿಗಳ ದುಂಡು ಮೇಜಿನ ಸಭೆಯಲ್ಲಿ ಕಾರ್ಮಿಕರ ಒಕ್ಕೊರಲ ಮನವಿ

ಜೀವನಕ್ಕೇನಾದರೂ ದಾರಿ ತೋರಿ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಕಾರ್ಮಿಕರಿಗೆ ಕನಿಷ್ಠ ವೇತನ ಕೊಡುತ್ತಿಲ್ಲ. ಭವಿಷ್ಯನಿಧಿ (ಪಿಎಫ್‌), ಆರೋಗ್ಯ ವಿಮೆ (ಇಎಸ್‌ಐ) ಸೌಲಭ್ಯವನ್ನೂ ಕಲ್ಪಿಸಿಲ್ಲ. ಮಲಹೊರುವ ಪದ್ಧತಿ ನಿಷೇಧಿಸಿದ್ದರೂ ಇನ್ನೂ ಜೀವಂತವಾಗಿದೆ...’

ರಾಜ್ಯಮಟ್ಟದ ದುಂಡು ಮೇಜಿನ ಸಭೆಗೆ ಹಲವು ಜಿಲ್ಲೆಗಳಿಂದ ಬಂದಿದ್ದ ಕಾರ್ಮಿಕರು, ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದು ಹೀಗೆ.

‘40 ವರ್ಷಗಳಿಂದ ಇದೇ ಕೆಲಸ ಮಾಡ್ತಾ ಇದ್ದೇನೆ. ಪುನರ್ವಸತಿ ಕಲ್ಪಿಸಿಲ್ಲ. ಜಿಲ್ಲಾಧಿಕಾರಿಗಳ ಬಳಿ ಹೋದರೆ ಪ್ರಾಣಿಗಳಂತೆ ನೋಡ್ತಾರೆ. ಆಸ್ಪತ್ರೆಗೆ ಹೋಗಲೂ ಕಾಸಿಲ್ಲ’ ಎಂದು ದೊಡ್ಡಬಳ್ಳಾಪುರದ ಕಾರ್ಮಿಕ ಹಳೇಕೊಪ್ಪ ಹೇಳಿದರು.

‘ನಗರಸಭೆಯಿಂದ ಸರಿಯಾಗಿ ಸಂಬಳ ಕೊಡ್ತಿಲ್ಲ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗ್ತಿಲ್ಲ. ಅವರು ನಮ್ಮ ಜೊತೆಯೇ ಕೆಲಸ ಬರ್ತಿದ್ದಾರೆ’ ಎಂದು ಕೋಲಾರದ ಕಾರ್ಮಿಕ ನಾರಾಯಣಸ್ವಾಮಿ ಹೇಳಿದರೆ, ‘ಗಂಡ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ವೇಳೆ ಪ್ರಾಣಬಿಟ್ಟರು. ಪರಿಹಾರ ಸಿಗಲಿಲ್ಲ. ಪುನರ್ವಸತಿಯ ಜೊತೆಗೆ ಉದ್ಯೋಗವನ್ನೂ ಕಲ್ಪಿಸಿಕೊಡಿ. ಜೀವನಕ್ಕೆ ದಾರಿ ಸಿಕ್ಕಂತಾಗುತ್ತದೆ’ ಎಂಬುದು ಕೋಲಾರದ ಲಕ್ಷ್ಮಿ ಎಂಬುವವರ ಬೇಡಿಕೆಯಾಗಿತ್ತು.

‘ಮಲಹೊರುವ ಕರ್ಮಚಾರಿಗಳ ಮಕ್ಕಳಿಗೆ ಪಿಯುಸಿ ನಂತರದ ವಿದ್ಯಾಭ್ಯಾಸಕ್ಕೆ ₹ 2 ಸಾವಿರ, ಎಂಜಿನಿಯರಿಂಗ್‌ ಓದುವವರಿಗೆ ₹ 4 ಸಾವಿರ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ₹ 5 ಸಾವಿರ ಪ್ರತಿ ತಿಂಗಳಿಗೆ ವಿದ್ಯಾರ್ಥಿ ವೇತನವನ್ನು ಸಫಾಯಿ ಕರ್ಮಚಾರಿ ಆಯೋಗದಿಂದ ನೀಡುತ್ತೇವೆ’ ಎಂದು ಆಯೋಗದ ಕಾರ್ಯದರ್ಶಿ ನಟರಾಜ್‌ ಭರವಸೆ ನೀಡಿದರು.

ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್‌, ‘ಉದ್ಯೋಗ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಪುನರ್ವಸತಿ ದೊರಕಿದ ಕಾರ್ಮಿಕರ ಮಕ್ಕಳಿಗೆ ಕೌಶಲ ತರಬೇತಿ, ಸಾಲ ಸೌಲಭ್ಯ ಒದಗಿಸಬೇಕು’ ಎಂದು ಮನವಿ ಮಾಡಿದರು.

‘ಮ್ಯಾನ್‌ಹೋಲ್‌ಗೆ ಇಳಿದು ಪ್ರಾಣ ಕಳೆದುಕೊಂಡವರಲ್ಲಿ ಬೆಂಗಳೂರಿನವರೇ ಹೆಚ್ಚು (36). ಅವರೂ ಆರ್ಥಿಕವಾಗಿ ಸಬಲರಾಗಿದ್ದರೆ ಇಂತಹ ದೌರ್ಜನ್ಯಗಳಿಗೆ ಬಲಿಯಾಗುತ್ತಿರಲಿಲ್ಲ. ಇನ್ಮುಂದೆ ಇಂಥ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘1993ರಿಂದ ಇಲ್ಲಿಯವರೆಗೂ ಮೃತಪಟ್ಟ 71 ವ್ಯಕ್ತಿಗಳ ಪೈಕಿ 67 ಮಂದಿಗೆ ಆಯೋಗದಿಂದ ಪರಿಹಾರ ದೊರಕಿಸಿಕೊಡಲಾಗಿದೆ’ ಎಂದರು.

ಸಾಮಾಜಿಕ ಕಾರ್ಯಕರ್ತೆ ಸೆಲ್ವಿಯಾ, ತಳ ಸಮುದಾಯಗಳ ಕೇಂದ್ರ ಸಂಚಾಲಕ ಜೆ.ಪ್ರದೀಪ್‌ ರಮಾವತ್‌, ತಳ ಸಮುದಾಯಗಳ ಅಧ್ಯಯನ ಕೇಂದ್ರದ ಸಂಶೋಧಕ ಆರ್‌.ವಿ.ಚಂದ್ರಶೇಖರ್, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ನಿತಿನ್‌ ರಮೇಶ್‌ ಇದ್ದರು.

**

ಕಾಯ್ದೆ ಏನು ಹೇಳುತ್ತದೆ?

* ನೈರ್ಮಲ್ಯರಹಿತ ಶೌಚಾಲಯಗಳನ್ನು ನಿರ್ಮೂಲನೆ ಮಾಡಬೇಕು

* ಮಲ ಹೊರುವುದಕ್ಕೆ ನೇಮಕ ಮಾಡಿಕೊಂಡವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಬೇಕು

* ಮಲಗುಂಡಿಗಳನ್ನು ಯಂತ್ರೋಪರಕರಣಗಳ ಮೂಲಕ ಸ್ವಚ್ಛಗೊಳಿಸಬೇಕು

* ಮಲಹೊರುವ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು