ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಡುವೆಯೂ ಸುರಂಗ ಕೊರೆಯುವ ಕೆಲಸ ಮುಗಿಸಿದ ಸಾರ್ಥಕತೆ

ಸುರಂಗ ಕೊರೆಯುವಾಗ ಸುರಕ್ಷತೆಯೇ ಸವಾಲು: ಅಭಿಪ್ರಾಯ ಹಂಚಿಕೊಂಡ ಟಿಬಿಎಂ ಸಿಬ್ಬಂದಿ
Last Updated 23 ಸೆಪ್ಟೆಂಬರ್ 2021, 3:22 IST
ಅಕ್ಷರ ಗಾತ್ರ

ಬೆಂಗಳೂರು: ‘ಸುರಂಗ ಕೊರೆಯುವ ಯಂತ್ರದಲ್ಲಿ ಏಕಕಾಲದಲ್ಲಿ 60ರಿಂದ 80 ಮಂದಿ ಕೆಲಸ ಮಾಡುತ್ತಿರುತ್ತಾರೆ. ಕೋವಿಡ್‌ನಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ವಹಿಸಿ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಗ್ಗೆ ತೃಪ್ತಿ ಇದೆ’

ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲಿ ಕಂಟೋನ್ಮೆಂಟ್‌ನಿಂದ ಶಿವಾಜಿನಗರದವರೆಗೆ ಸುರಂಗ ಕೊರೆದ ಊರ್ಜಾ ಯಂತ್ರದಲ್ಲಿ ಸುರಂಗ ಸುರಕ್ಷತಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ ರೋಹಿತ್‌ ಅವರು ತಮ್ಮ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದು ಹೀಗೆ.

‘ಕೋವಿಡ್‌ ಸಂದರ್ಭದಲ್ಲಿ ಕಾಮಗಾರಿ ನಡೆಸುವುದು ಸವಾಲಿನ ಕೆಲಸ. ಯಂತ್ರವು ದಿನದ 24 ಗಂಟೆಯೂ ಚಾಲನೆಯಲ್ಲೇ ಇರುತ್ತದೆ. ಸಿಬ್ಬಂದಿ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಯಾವುದೇ ಅಪಾಯ ಎದುರಾಗದಂತೆ ತಡೆಯಲು ಯಂತ್ರದೊಳಗೆ ವೈದ್ಯರು ಇದ್ದರು. ಔಷಧಗಳು, ಸುರಕ್ಷತಾ ಪರಿಕರಗಳೆಲ್ಲವನ್ನೂ ಸಜ್ಜಾಗಿ ಇಟ್ಟುಕೊಂಡಿದ್ದೆವು’ ಎಂದು ಅವರು ವಿವರಿಸಿದರು.

‘ಇಲ್ಲಿನ ಭೌಗೋಳಿಕ ಪರಿಸ್ಥಿತಿ ಸ್ವಲ್ಪ ಕಠಿಣ. ಮೆದು ಮಣ್ಣು, ಕಠಿಣ ಶಿಲೆಗಳ ಮಿಶ್ರವಾಗಿರುವ ಈ ಪರಿಸರದಲ್ಲಿ ಕೆಲವೊಮ್ಮೆ 1.5 ಅಡಿ ಸುರಂಗ ಕೊರೆಯಲೂ ಸಾಧ್ಯವಾಗುತ್ತಿರಲಿಲ್ಲ. ಕೆಲವು ದಿನ ಗರಿಷ್ಠ 10ರಿಂದ 12 ಅಡಿಗಳಷ್ಟು ಸುರಂಗ ಕೊರೆದಿದ್ದೇವೆ. ಮೆಟ್ರೊ ಮೊದಲ ಹಂತದ ಕಾಮಗಾರಿಗೆ ಬಳಸಿದ ಯಂತ್ರಗಳಿಗೆ ಹೋಲಿಸಿದರೆ ಚೀನಾ ಮೆಟ್ರೊ ರೈಲು ಕಾರ್ಪೊರೇಷನ್‌ ತಯಾರಿಸಿರುವ ಊರ್ಜಾ ಯಂತ್ರ ತುಂಭಾ ಸುಧಾರಿತ ತಂತ್ರಜ್ಞಾನ ಹೊಂದಿದೆ’ ಎಂದು ಈ ವೃತ್ತಿಯಲ್ಲಿ 10ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ರೋಹಿತ್‌ ತಿಳಿಸಿದರು.

‘ಈ ಸುರಂಗ ಕೊರೆಯುವಾಗ ನಮಗೆ 14 ಕೊಳವೆಬಾವಿಗಳು ಸಿಕ್ಕಿವೆ. ಅವುಗಳ ಮಾಲೀಕರ ಮನವೊಲಿಸಿ ತೆರವುಗೊಳಿಸಿದ್ದೇವೆ. ಇದರಿಂದ ಕಾಮಗಾರಿಗೆ ಸಮಸ್ಯೆ ಆಗಿಲ್ಲ. ಆದರೆ, ಇಲ್ಲಿ ಕೆಲವು ಕಡೆ ಮೆದು ಮಣ್ಣು ಇದ್ದುದರಿಂದ ಸ್ವಲ್ಪ ಸಮಸ್ಯೆಯೂ ಕಾಣಿಸಿತ್ತು. ಅತಿ ಹಳೆಯ ಕಟ್ಟಡಗಳನ್ನು ಹೊಂದಿರುವ ಪ್ರದೇಶವಿದು. ಇಲ್ಲಿ ಸರಿಸುಮಾರು 20 ಅಡಿ ಆಳದಲ್ಲಿ ಸುರಂಗ ಕೊರೆಯಲಾಗಿದೆ. ಆದರೂ ಕಂಪನದಿಂದ ಕಟ್ಟಡಗಳಿಗೆ ಹಾನಿಯಾಗುವ ಅಪಾಯವಿತ್ತು. ಅದೃಷ್ಟವಶಾತ್‌ ಅಂತಹದ್ದು ನಡೆದಿಲ್ಲ’ ಎಂದು ಬಿಎಂಆರ್‌ಸಿಎಲ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಝರ್‌ ಅಹ್ಮದ್‌ ಸೌದಾಗರ್‌ ವಿವರಿಸಿದರು.

2021ರ ಜುಲೈನಲ್ಲಿ ಈ ಸುರಂಗ ಕೊರೆಯುವ ಕಾಮಗಾರಿ ಆರಂಭವಾಗಿತ್ತು. ಕೊವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ವಲ್ಪ ದಿನ ಕೆಲಸ ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT