ಮಂಗಳವಾರ, ಜನವರಿ 18, 2022
27 °C
ಮುಜಾಫರ್‌ ಅಸ್ಸಾದಿ ‍ಪುಸ್ತಕ ಬಿಡುಗಡೆ

ಮತೀಯ ದ್ವೇಷದ ಕುರಿತು ಮೌನ ಸಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮತೀಯ ದ್ವೇಷದ ಕುರಿತು ಹೆಚ್ಚು ಜನರು ಮೌನಕ್ಕೆ ಶರಣಾಗಿರುವುದು ಸರಿಯಲ್ಲ. ಮತೀಯ ದ್ವೇಷದ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸುವುದು ಈಗಿನ ತುರ್ತು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್‌ ಪ್ರೊ. ಮುಜಾಫರ್‌ ಅಸ್ಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.‌ ‘ದೇಶದಲ್ಲಿ ಕಡಿಮೆ ಸಂಖ್ಯೆಯ ಜನರು ದೊಡ್ಡ ಧ್ವನಿಯಲ್ಲಿ ಮತೀಯ ದ್ವೇಷದ ಮಾತುಗಳನ್ನು ಆಡುತ್ತಿದ್ದಾರೆ. ಅವರ ಸದ್ದು ಜೋರಾಗಿದೆ. ಖಂಡಿಸುವವರ ಸಂಖ್ಯೆಯೂ ಕಡಿಮೆ ಇದೆ. ಆದರೆ, ಹೆಚ್ಚಿನ ಸಂಖ್ಯೆಯ ಜನರು ಈ ವಿಷಯದಲ್ಲಿ ಮೌನ ತಾಳಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು.

ಧರ್ಮ ಮತ್ತು ಜಾತಿಯ ಆಧಾರದಲ್ಲಿ ಮನುಷ್ಯರನ್ನು ವಿರೋಧಿಸುವುದು ಹೆಚ್ಚುತ್ತಲೇ ಇದೆ. ದೇಶದಲ್ಲಿ ಅಕ್ಷರಸ್ಥರ ಪ್ರಮಾಣ ಹೆಚ್ಚಿದರೂ ಮೌಢ್ಯ ಮತ್ತು ಅನಿಷ್ಟ ಪದ್ಧತಿಗಳ ಆಚರಣೆ ಕೊನೆಯಾಗಿಲ್ಲ. ಜಾತಿಯ ವಿಷಯದಲ್ಲಿ ಆತ್ಮವಂಚಕರಂತೆ ನಡೆದುಕೊಳ್ಳುವವರೇ ಹೆಚ್ಚು ಮಂದಿ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್ ಮಾತನಾಡಿ, ‘ಭಾರತಕ್ಕೆ ಅನೇಕ ರಾಷ್ಟ್ರಗಳಿಂದ ಹಲವು ಜನಾಂಗಗಳ ಜನರು ವಿವಿಧ ಕಾರಣಗಳಿಗಾಗಿ ವಲಸೆ ಬಂದಿದ್ದಾರೆ. ಅವರಲ್ಲಿ ಹೆಚ್ಚು ಮಂದಿ ಇಲ್ಲಿಯೇ ಉಳಿದು ಭಾರತೀಯರ ಜತೆ ಬೆರೆತಿದ್ದಾರೆ. ದೇಶದ ಜನರನ್ನು ಪ್ರತ್ಯೇಕಿಸಿ ನೋಡುವುದಕ್ಕೆ ಅರ್ಥವೇ ಇಲ್ಲ’ ಎಂದು ಹೇಳಿದರು.

ದೇಶದಲ್ಲಿ 4,635 ಜಾತಿ ಹಾಗೂ ಉಪ ಜಾತಿಗಳಿವೆ. ಜಾತಿ ಮತ್ತು ವರ್ಗ ಆಧಾರಿತ ಅಸಮಾನತೆ ಬೇರೂರಿದೆ. ಪರಿಣಾಮವಾಗಿ ಜನರ ನಡುವೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆ ಹೆಚ್ಚಾಗಿದೆ. ಸಂವಿಧಾನದ ಬಲದಿಂದ ಮಾತ್ರ ಇದನ್ನು ಹೋಗಲಾಡಿಸಲು ಸಾಧ್ಯ ಎಂದರು.

ಕೃತಿ ಕುರಿತು ಮಾತನಾಡಿದ ಪತ್ರಕರ್ತೆ ಸಿಂಥಿಯಾ ಸ್ಟೀಫನ್‌, ‘ದೇಶದಲ್ಲಿ ಆಡಳಿತ ವ್ಯವಸ್ಥೆ ಮತ್ತು ರಾಜಕೀಯವನ್ನು ಜಾತಿ ಹೇಗೆ ಆವರಿಸಿಕೊಂಡಿದೆ ಎಂಬುದನ್ನು ಕೃತಿಯಲ್ಲಿ ಅತ್ಯಂತ ಸರಳವಾಗಿ ನಿರೂಪಿಸಲಾಗಿದೆ. ಜಾತಿ ಮತ್ತು ಅದರ ಸುತ್ತ ಬೆಸೆದುಕೊಂಡಿರುವ ಅತ್ಯಂತ ಕ್ಲಿಷ್ಟಕರವಾದ ಸಂಗತಿಗಳನ್ನು ಕನ್ನಡದ ಓದುಗರ ಮುಂದೆ ಮಂಡಿಸಲಾಗಿದೆ’ ಎಂದು ವಿಶ್ಲೇಷಿಸಿದರು.

ಮುಜಾಫರ್‌ ಅಸ್ಸಾದಿ ಮಾತನಾಡಿ, ‘ಜಾತಿ ಎಂಬುದು ಅಸ್ಮಿತೆಯ ಕುರುಹು. ಅದು ವಾಸ್ತವವೂ ಹೌದು. ಮುಸ್ಲಿಮರಲ್ಲಿ ಇರುವ ಜಾತಿ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಿದ್ದೇನೆ’ ಎಂದರು.

ಬಹುರೂಪಿ ಪ್ರಕಾಶನದ ಶ್ರೀಜಾ, ವಿಸ್ತಾರ್‌ ಟ್ರಸ್ಟ್‌ನ ಡೇವಿಡ್‌ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು