ಸೋಮವಾರ, ಸೆಪ್ಟೆಂಬರ್ 20, 2021
30 °C

‘ತಿಗಳರ ಬೇಡಿಕೆಗಳಿಗೆ ಸ್ಪಂದಿಸಲು ಸಿದ್ಧ’; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜಕೀಯ ಸ್ಥಾನಮಾನ ಇಲ್ಲದಿದ್ದರೆ ಧ್ವನಿ ಎತ್ತಲು ಸಾಧ್ಯವಿಲ್ಲ. ತಿಗಳ ಸಮುದಾಯದ ಬೇಡಿಕೆ, ನೋವುಗಳಿಗೆ ಸ್ಪಂದಿಸಲು ಕಾಂಗ್ರೆಸ್‌ ಸಿದ್ಧವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಗರದ ಸಿದ್ಧಾಪುರದಲ್ಲಿ ಸೋಮವಾರ ನಡೆದ ತಿಗಳ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಚಿಕ್ಕಂದಿನಿಂದಲೂ ತಿಗಳ ಸಮುದಾಯದ ಜತೆ ಬೆರೆತು, ಬೆಳೆದವನು. ಹೀಗಾಗಿ ಈ ಸಮುದಾಯದ ಮೇಲೆ ನನಗೆ ಹೆಚ್ಚು ನಂಬಿಕೆ’ ಎಂದರು.

‘ಡಾ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ, ಪೊಲೀಸ್ ಅಧಿಕಾರಿಗಳು ದಟ್ಟ ಕಾಡಿನಲ್ಲಿ ಹೋಗಲು ಹಿಂಜರಿಯುತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, ನಮ್ಮ ತಾಲ್ಲೂಕಿನಲ್ಲಿ ಶಿಕಾರಿ ಮಾಡುತ್ತಿದ್ದ ತಿಗಳ ಸಮುದಾಯದ ಸ್ನೇಹಿತರಿಗೆ ಗುರುತಿನ ಚೀಟಿ ಕೊಟ್ಟು ಕಾರ್ಯಾಚರಣೆಗೆ ಬಳಸಿಕೊಳ್ಳಲು ಸೂಚಿಸಿದ್ದರು. ಹೀಗೆ ತಿಗಳ ಸಮುದಾಯದವರು ಧೈರ್ಯವಂತರು ಹಾಗೂ ನಂಬಿಕಸ್ಥರು’ ಎಂದೂ ನೆನಪಿಸಿಕೊಂಡರು.

‘ಪ್ರವರ್ಗ 2ಎ ಮೀಸಲಾತಿಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂಬುದು ನಿಮ್ಮ ನೋವು. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ನೆರವು ಸಿಗಬೇಕು ಎನ್ನುವುದು ಬೇಡಿಕೆ. ಸಮುದಾಯದವರಾದ ಪಿ.ಆರ್. ರಮೇಶ್ ವಿಧಾನ ಪರಿಷತ್‌ ಸದಸ್ಯ. ಗುಣಶೇಖರ್, ಬಸವರಾಜ್, ಕೃಷ್ಣಮೂರ್ತಿ ಸೇರಿದಂತೆ ಇನ್ನೂ ಅನೇಕ ಸಮರ್ಥ ನಾಯಕರು ಸಮುದಾಯದಲ್ಲಿದ್ದಾರೆ. ಅವರೆಲ್ಲರನ್ನೂ ಸರಿಯಾಗಿ ಬಳಸಿಕೊಳ್ಳಬೇಕಿದೆ’ ಎಂದರು.

‘ಸರ್ಕಾರಿ ಕಾರ್ಯಕ್ರಮದಲ್ಲಿ ಹೂವಿನ ನಿಷೇಧ ನಿರ್ಧಾರದಿಂದ ಆಗಿರುವ ತೊಂದರೆ ಸೇರಿದಂತೆ ಅನೇಕ ನೋವು ಹಾಗೂ ಬೇಡಿಕೆ ಮುಂದಿಟ್ಟಿದ್ದೀರಿ. ಕೋವಿಡ್ ಸಮಯದಲ್ಲಿ ಈ ಸಮುದಾಯಕ್ಕೆ ಅನ್ಯಾಯವಾಗಿದೆ. ಕರಗ ಉತ್ಸವಕ್ಕೆ ಅನುದಾನ ಅಗತ್ಯವಿದೆ. ಮುಂದೆ ನಿಮ್ಮ ಜತೆಯಲ್ಲೇ ಇರುತ್ತೇನೆ. ಸಮುದಾಯಕ್ಕೆ ಅವಕಾಶ ನೀಡಲು ಪಕ್ಷದ ನಾಯಕರ ಜತೆ ಚರ್ಚೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು