ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್- ಕಿಮ್ ಐತಿಹಾಸಿಕ ಸಭೆ, ಹೊಸ ಆರಂಭ

Last Updated 13 ಜೂನ್ 2018, 20:08 IST
ಅಕ್ಷರ ಗಾತ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಧ್ಯೆ ಸಿಂಗಪುರದಲ್ಲಿ ನಡೆದ ಸಭೆ ಐತಿಹಾಸಿಕವಾದದ್ದು. ಅತಿರೇಕದ ಸ್ವಭಾವಗಳ ಈ ಇಬ್ಬರು ನಾಯಕರ ಸಮ್ಮಿಲನ, ಜಾಗತಿಕವಾಗಿ ನೀಡಿದ ಸಂದೇಶ ಮಹತ್ವದ್ದು. ಇತ್ತೀಚಿನವರೆಗೂ ಮಾತುಗಳ ಸಮರದಲ್ಲಿ ನಿರತರಾಗಿದ್ದ ಉಭಯ ನಾಯಕರು ಹಳೆಯ ಗೆಳೆಯರಂತೆ ಪ್ರದರ್ಶಿಸಿದ ಆಪ್ತತೆ ವಿಶೇಷ. ಸಹಜವಾಗಿಯೇ ಈ ಭೇಟಿಯ ದೃಶ್ಯಗಳು ಹೆಚ್ಚು ಪ್ರಚಾರ ಪಡೆದಿವೆ. ಈ ಇಬ್ಬರು ನಾಯಕರೂ ಕೈಕುಲುಕಿ ಹೊಸ ಭವಿಷ್ಯದ ವಿಶ್ವಾಸ ತೋರಿದ್ದಾರೆ. ಈ ಮಟ್ಟ ತಲುಪಿದ ಈ ಪಯಣವೇ ನಾಟಕೀಯವಾದದ್ದು. ಇದು ಅಷ್ಟು ಸುಲಭದ್ದೂ ಆಗಿರಲಿಲ್ಲ. ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್‌ಗೆ ಉತ್ತರ ಕೊರಿಯಾ ಅವಮಾನ ಮಾಡಿದೆ ಎಂದು ಸಭೆಯನ್ನು ಟ್ರಂಪ್ ಅವರು ಕೆಲವು ವಾರಗಳ ಹಿಂದಷ್ಟೇ ರದ್ದು ಮಾಡಿದ್ದರು. ಆದರೆ ಕಡೆಗೂ ರಾಜತಾಂತ್ರಿಕ ಪ್ರಯತ್ನಗಳು ಫಲ ನೀಡಿವೆ. ಹಳೆಯದನ್ನೆಲ್ಲಾ ಮರೆತು ಕೊರಿಯಾ ಪರ್ಯಾಯ ದ್ವೀಪದ ಸಂಪೂರ್ಣ ಅಣು ನಿಶ್ಶಸ್ತ್ರೀಕರಣಕ್ಕಾಗಿ ಕೆಲಸ ಮಾಡುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭರವಸೆ ನೀಡಿದ್ದಾರೆ. ಹಾಗೆಯೇ ಉತ್ತರ ಕೊರಿಯಾಕ್ಕೆ ಭದ್ರತೆ ಒದಗಿಸುವುದಾಗಿ ಟ್ರಂಪ್ ಅವರು ಜಂಟಿ ಒಪ್ಪಂದದಲ್ಲಿ ಹೇಳಿರುವುದು ಮಹತ್ವದ್ದು. ಕೊರಿಯಾ ಪರ್ಯಾಯ ದ್ವೀಪವನ್ನು ಅಣ್ವಸ್ತ್ರ ಮುಕ್ತಗೊಳಿಸುವ ಭರವಸೆಯನ್ನು ಸಹಜವಾಗಿಯೇ ಜಪಾನ್ ಪ್ರಧಾನಿ ಶಿಂಜೊ ಅಬೆ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರು ಸ್ವಾಗತಿಸಿದ್ದಾರೆ. ಆದರೆ, ಕೆಲವೇ ತಿಂಗಳ ಹಿಂದೆ ಇಡೀ ಜಗತ್ತನ್ನು ಅಣು ಸಮರದ ಅಂಚಿಗೆ ದೂಡಿದ್ದ ಕಿಮ್‌ನಂತಹ ವ್ಯಕ್ತಿಯನ್ನು ಸಮಾನ ಎಂದು ಪರಿಗಣಿಸಿದ ಟ್ರಂಪ್ ಕ್ರಮ ಸರಿಯಲ್ಲ ಎಂದು ಟೀಕಾಕಾರರು ಅತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ. ಕಿಮ್ ಆಡಳಿತದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಗಳ ಅಸಂಖ್ಯ ಆರೋಪಗಳಿರುವುದನ್ನೂ ಈ ಟೀಕಾಕಾರರು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಅಮೆರಿಕ ನಡೆಸುತ್ತಿರುವ ಸೇನಾ ಸಮರಾಭ್ಯಾಸ ನಿಲ್ಲಿಸುವುದಾಗಿ ಟ್ರಂಪ್ ಪ್ರಕಟಿಸಿರುವುದಂತೂ ಅನೇಕರಿಗೆ ಅಚ್ಚರಿ ತಂದಿದೆ. ಇಂತಹ ಕ್ರಮಗಳಿಂದ ಕಿಮ್‍ಗೆ ಜಾಗತಿಕ ಸ್ವೀಕೃತಿ ಸಿಕ್ಕಂತಾಗಿದೆ ಎಂಬಂಥ ಅಸಮಾಧಾನವೂ ವ್ಯಕ್ತವಾಗಿದೆ. ಆದರೆ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದಕ್ಕಾಗಿ ಉತ್ತರ ಕೊರಿಯಾ ಮೇಲೆ ಹೇರಿರುವ ನಿರ್ಬಂಧಗಳನ್ನು ಸದ್ಯಕ್ಕೆ ತೆರವು ಮಾಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿರುವುದನ್ನೂ ಗಮನಿಸಬೇಕು.

ಈ ಎಲ್ಲಾ ಟೀಕೆಗಳ ನಡುವೆಯೂ ಟ್ರಂಪ್–ಕಿಮ್ ನಡುವೆ ನಡೆದ ಮೊದಲ ಭೇಟಿಯ ಮಹತ್ವವನ್ನು ನಿರಾಕರಿಸಲಾಗದು. ರಾಜತಾಂತ್ರಿಕ ಪ್ರಯತ್ನಗಳು ಸಾಧಿಸಿದ ಗೆಲುವು ಐತಿಹಾಸಿಕವಾದದ್ದು. ಈ ಶೃಂಗಸಭೆಯ ಫಲಶ್ರುತಿ ಸಾಂಕೇತಿಕ ಮಾತ್ರ. ಏಕೆಂದರೆ ಜಂಟಿ ಒಪ್ಪಂದದಲ್ಲಿ ಕೈಗೊಳ್ಳಲಾಗುವ ನಿರ್ದಿಷ್ಟ ಕ್ರಮಗಳನ್ನು ವಿವರಿಸಿಲ್ಲ. ಅಣು ನಿಶ್ಶಸ್ತ್ರೀಕರಣ ಜಾರಿಯಾಗುವ ಬಗೆ ಹೇಗೆ ಎಂಬುದರ ವಿವರಗಳನ್ನು ನೀಡಿಲ್ಲ. ಈ ಕ್ರಮಗಳಿಗೆ ಗಡುವನ್ನೂ ಸ್ಪಷ್ಟಪಡಿಸಿಲ್ಲ. ಉಭಯ ದೇಶಗಳ ನಡುವೆ ಔಪಚಾರಿಕ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ ವಿಚಾರವೂ ಪ್ರಸ್ತಾಪವಾಗಿಲ್ಲ. ಈ ಅನಿಶ್ಚಯ ಅಂತ್ಯವಾಗಬೇಕು. 1972ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಚೀನಾಕ್ಕೆ ಭೇಟಿ ನೀಡಿ ಹಲವು ದಶಕಗಳ ವೈರತ್ವವನ್ನು ಕೊನೆಗಾಣಿಸಿದ್ದರು. ಕಿಮ್ ಜೊತೆಗಿನ ಭೇಟಿ ಅದೇ ರೀತಿಯದ್ದು ಎಂದು ಬಿಂಬಿಸಿಕೊಳ್ಳುವ ಯತ್ನವನ್ನೂ ಟ್ರಂಪ್ ಮಾಡಿದ್ದಾರೆ. ಈ ಆರಂಭ, ತಾರ್ಕಿಕ ಮುಕ್ತಾಯ ಕಾಣಲಿ. ಕೊರಿಯಾ ಪರ್ಯಾಯ ದ್ವೀಪದಲ್ಲಿ ಶಾಂತಿ ಸ್ಥಾಪನೆಯ ಹಾದಿ ಸುಗಮವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT