ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕಾರ್ಯಕ್ರಮಗಳಿಗೆ ಕತ್ತರಿ: ಬಿಬಿಎಂಪಿ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ

Last Updated 9 ಸೆಪ್ಟೆಂಬರ್ 2021, 2:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರ ಅಭಿವೃದ್ಧಿಗಾಗಿ ಕೈಗೊಳ್ಳುವ ಕಲ್ಯಾಣ ಕಾರ್ಯಕ್ರಮಗಳನ್ನು ಕತ್ತರಿ ಹಾಕಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬಿಬಿಎಂಪಿ ವಿರುದ್ಧ ಬುಧವಾರ ಪ್ರತಿಭಟನೆ ನಡೆಯಿತು.

ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಕಾರರು, ‘ಕೋವಿಡ್‌ ನೆಪವೊಟ್ಟಿ 2020–21 ಹಾಗೂ 2021–22ನೇ ಸಾಲಿನಲ್ಲಿ ಒಂಟಿ ಮನೆ, ಲ್ಯಾಪ್‌ಟಾಪ್‌ ವಿತರಣೆ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸ್ಥಗಿತಗೊಳಿಸಲಾಗಿದೆ. ಈ ಸವಲತ್ತುಗಳನ್ನು ಮತ್ತೆ ಆರಂಭಿಸಬೇಕು. ಇವುಗಳನ್ನು ಜನಪ್ರತಿನಿಧಿಗಳ ಜನ್ಮದಿನದಂದು ವಿತರಿಸುವುದು ಸಂವಿಧಾನ ವಿರೋಧಿ ನಡೆ. ಈ ಪರಿಪಾಠ ಬಿಡಬೇಕು’ ಎಂದು ಒತ್ತಾಯಿಸಿದರು.

‘ರಾಜೀವ ಗಾಂಧಿ ವಸತಿ ಯೋಜನೆ ಅಡಿ ವಸತಿ ಮಂಜೂರಾಗಿರುವ ದೊಡ್ಡ ಕನ್ನಲ್ಲಿ ಗ್ರಾಮದ 482 ಕುಟುಂಬಗಳಿಗೆ ಹಾಗೂ ದೇವರಬೀಸನಹಳ್ಳಿ ಗ್ರಾಮದ 480 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದರೂ, ಅವರ ಖಾತಾ ನೋಂದಣಿ ಮಾಡಿಲ್ಲ. ಪಾಲಿಕೆ ವತಿಯಿಂದಲೇ ಅವರ ಖಾತಾ ನೋಂದಣಿ ಮಾಡಿಸಬೇಕು. ಈ ವಸತಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಕೂಡ್ಲು ಗ್ರಾಮದ ಬಸವಲಿಂಗಪ್ಪ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಕೋರಿದರು.

ಎಸ್‌ಸಿಪಿ– ಟಿಎಸ್‌ಪಿ ಅನುದಾನವನ್ನು ಕೆಲ ಬಿಬಿಎಂಪಿ ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಗಳನ್ನು ಬೆಗಹರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಟ್ಯಾಂಕರ್‌ ನೀರು ಪೂರೈಕೆ ಹೆಸರಿನಲ್ಲಿ ಲಕ್ಷಗಟ್ಟಲೆ ಬಿಲ್‌ ಮಾಡಲಾಗುತ್ತಿದೆ. ಇದಕ್ಕೆ ಶೇ 24.10ರ ಮೀಸಲು ಅನುದಾನವನ್ನೂ ದುರ್ಬಳಕೆ ಮಾಡಲಾಗಿದೆ. ಈ ಟ್ಯಾಂಕರ್‌ ಮಾಫಿಯಾ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಆರ್‌.ಎಂ.ಎನ್‌. ರಮೇಶ, ಕಾರ್ಯಾಧ್ಯಕ್ಷ ಪಿ.ಮೂರ್ತಿ, ಹಿರಿಯ ಉಪಾಧ್ಯಕ್ಷ ಸೋರುಣಿಸೆ ವೆಂಕಟೇಶ್‌, ಉಪಾಧ್ಯಕ್ಷರಾದ ಜೆ.ಚಂದ್ರಪ್ಪ, ಕೃಷ್ಣಪ್ಪ, ರಾಜ್ಯ ಸಮಿತಿ ಸದಸ್ಯ ಕನ್ನಲ್ಲಿ ಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT