ವಾಟ್ಸ್‌ಆ್ಯಪ್ ಸ್ಟೇಟಸ್‌ ಸುಳಿವಿನಿಂದ ಸಿಕ್ಕಿಬಿದ್ದ ಕಳ್ಳಿ!

6
ವೃದ್ಧರ ಆರೈಕೆಗೆ ಬಂದು ಒಡವೆ ಹೊತ್ತೊಯ್ದಿದ್ದಳು

ವಾಟ್ಸ್‌ಆ್ಯಪ್ ಸ್ಟೇಟಸ್‌ ಸುಳಿವಿನಿಂದ ಸಿಕ್ಕಿಬಿದ್ದ ಕಳ್ಳಿ!

Published:
Updated:
Deccan Herald

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ವರ್ಷದ ಹಿಂದೆ ಚಿನ್ನಾಭರಣ ದೋಚಿದ್ದ ಕವಿತಾ ಬಾಯಿ ಎಂಬಾಕೆ, ಆ ಒಡವೆ ಧರಿಸಿ ತೆಗೆದುಕೊಂಡ ಫೋಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿ ಈಗ ಶ್ರೀರಾಂಪುರ ಪೊಲೀಸರ ಅತಿಥಿಯಾಗಿದ್ದಾಳೆ.

ಕವಿತಾಳಿಂದ 150 ಗ್ರಾಂ ಚಿನ್ನಾಭರಣ ಹಾಗೂ ಎರಡು ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2017ರ ಮೇ 11ರಂದು ಈಕೆ ಸತ್ಯನಾರಾಯಣ ರಾವ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

65 ವರ್ಷದ ರಾವ್, ಪತ್ನಿ ಜತೆ ಶ್ರೀರಾಂಪುರ 3ನೇ ಅಡ್ಡರಸ್ತೆಯ ಮನೆಯಲ್ಲಿ ನೆಲೆಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಆರೈಕೆಗಾಗಿ ರಾವ್ ಅವರು ತಿಂಗಳಿಗೆ ₹ 15 ಸಾವಿರ ವೇತನ ನಿಗದಿ ಮಾಡಿ ಕವಿತಾಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು.

ಅಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ ಕವಿತಾ, ಮನೆಯ ಮೂರು ಕೀಗಳ ಪೈಕಿ ಒಂದನ್ನು ಕದ್ದಿದ್ದಳು. ಮೇ 10ರಂದು ರಾವ್ ಅವರ ಪತ್ನಿಯ ಅನಾರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ, ಕೂಡಲೇ ಅವರನ್ನು ಎಚ್‌ಸಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ದಿನ ದಂಪತಿ ಜತೆ ಆಸ್ಪತ್ರೆಯಲ್ಲೇ ಉಳಿದಿದ್ದ ಕವಿತಾ, ‘ನಾನು ಮನೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಬೆಳಿಗ್ಗೆ ಹೊರಟಿದ್ದಳು.

ಅಲ್ಲಿಂದ ದಂಪತಿಯ ಮನೆಗೆ ಬಂದ ಕವಿತಾ, ನಕಲಿ ಕೀ ಬಳಸಿ ಒಳ ಹೋಗಿ ಆಭರಣ ದೋಚಿದ್ದಳು. ಅಲ್ಲದೆ, ತನ್ನ ಮೇಲೆ ಅನುಮಾನ ಬರಬಾರದೆಂದು ಬಾಲ್ಕನಿಯ ಬಾಗಿಲು ತೆಗೆದು ಹೋಗಿದ್ದಳು. ಎರಡು ದಿನಗಳ ಬಳಿಕ ರಾವ್ ದಂಪತಿ ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ‘ಕಳ್ಳರು ಬಾಲ್ಕನಿಯ ಬಾಗಿಲು ಮುರಿದು ಮನೆಗೆ ನುಗ್ಗಿ ಆಭರಣ ದೋಚಿದ್ದಾರೆ’ ಎಂದು ಅವರು ಶ್ರೀರಾಂಪುರ ಠಾಣೆಗೆ ದೂರು ಕೊಟ್ಟಿದ್ದರು.

ಕಳ್ಳತನ ನಡೆದ ಒಂದೂವರೆ ತಿಂಗಳಲ್ಲೇ ರಾವ್ ಪತ್ನಿ ಕೊನೆಯುಸಿರೆಳೆದರು. ಆನಂತರ ಅಲ್ಲಿ ಕೆಲಸ ತೊರೆದ ಕವಿತಾ, ಖಾಸಗಿ ಕಂಪನಿ ಸೇರಿಕೊಂಡಳು. ಆಕೆ ಬಗ್ಗೆ ರಾವ್‌ಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ, ಪೊಲೀಸರು ಮಾತ್ರ ಆಕೆಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು.

ಆಭರಣಗಳ ನಡುವೆ ಹೋಲಿಕೆ
‘ಕವಿತಾಳ ಜೀವನ ಶೈಲಿ ಬದಲಾಗಿತ್ತು. ದೊಡ್ಡ ಚಿನ್ನದ ಸರಗಳನ್ನು ಹಾಕಿಕೊಂಡು ಓಡಾಡುತ್ತಿದ್ದಳು. ಇತ್ತೀಚೆಗೆ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ತನ್ನ ಫೋಟೊ ಹಾಕಿಕೊಂಡಿದ್ದಳು. ಅದರಲ್ಲಿ ಆಕೆ ಧರಿಸಿದ್ದ ಒಡವೆಗಳಿಗೂ, ರಾವ್ ಮನೆಯಿಂದ ಕಳವಾಗಿದ್ದ ಆಭರಣಗಳಿಗೂ ಹೋಲಿಕೆ ಕಂಡುಬಂತು. ಠಾಣೆಗೆ ಕರೆಸಿ ಹೆಚ್ಚಿನ ವಿಚಾರಣೆಗೆ ಒಳಪ‍ಡಿಸಿದಾಗ ತಪ್ಪೊಪ್ಪಿಕೊಂಡಳು’ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !