ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಬ್ಬರಿಗೆ ಥಳಿತ; ಸ್ಥಳೀಯರ ವಿರುದ್ಧ ಎಫ್‌ಐಆರ್

ಪಾದರಾಯನಪುರದಿಂದ ವ್ಹೀಲಿಂಗ್ ಮಾಡಲು ಬಂದಿದ್ದರೆಂಬ ಶಂಕೆ | ಪೊಲೀಸರಿಂದಲೂ ಹಲ್ಲೆ; ಆರೋಪ
Last Updated 9 ಮೇ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಯುವಕರಿಬ್ಬರನ್ನು ಥಳಿಸಲಾಗಿದ್ದು, ಈ ಸಂಬಂಧ ಸ್ಥಳೀಯರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಪಾದರಾಯನಪುರದವರೆಂದು ಹೇಳಿಕೊಂಡಿದ್ದ ಯುವಕರು, ದ್ವಿಚಕ್ರ ವಾಹನದಲ್ಲಿ ಸಹಕಾರ ನಗರಕ್ಕೆ ಬಂದಿದ್ದರು. ಅವರನ್ನು ನೋಡಿದ ನಿವಾಸಿಗಳು, ವ್ಹೀಲಿಂಗ್ ಮಾಡಲು ಬಂದಿದ್ದಾರೆಂದು ಅನುಮಾನಗೊಂಡು ಥಳಿಸಿದ್ದರು’ ಎಂದು ಕೊಡಿಗೇಹಳ್ಳಿ ಪೊಲೀಸರು ಹೇಳಿದರು.

‘ಥಳಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವಕ ನೀಡಿರುವ ದೂರು ಆಧರಿಸಿ ಸ್ಥಳೀಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಪೊಲೀಸರಿಂದಲೂ ಹಲ್ಲೆ ಆರೋಪ: ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಯುವಕರಿಬ್ಬರನ್ನು ತಡೆದಿದ್ದ ಸ್ಥಳೀಯರು, ಅವರ ವಿಳಾಸ ಕೇಳಿದ್ದರು. ಪಾದರಾಯನಪುರ ಎನ್ನುತ್ತಿದ್ದಂತೆ ಆತಂಕಗೊಂಡ ಸ್ಥಳೀಯರು, ‘ನಿಮ್ಮ ಪ್ರದೇಶ ಸೀಲ್‌ಡೌನ್ ಆಗಿದೆ. ಅಲ್ಲಿಂದ ಹೇಗೆ ನೀವು ಹೊರಗೆ ಬಂದಿರಿ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಯುವಕರು ಉತ್ತರಿಸಿರಲಿಲ್ಲ.

ಗಸ್ತಿನಲ್ಲಿದ್ದ ಪೊಲೀಸರಿಬ್ಬರು ಸ್ಥಳಕ್ಕೆ ಬಂದಿದ್ದರು. ಯುವಕರನ್ನು ವಿಚಾರಿಸುವ ವೇಳೆಯಲ್ಲೇ ಪೊಲೀಸ್ ಒಬ್ಬಾತ, ಬೂಟುಗಾಲಿನಿಂದ ಒದ್ದಿದ್ದ. ನಂತರ, ಸ್ಥಳೀಯನೊಬ್ಬ ಕಟ್ಟಿಗೆಯಿಂದ ಯುವಕರ ಕಾಲಿಗೆ ಹೊಡೆದಿದ್ದ. ಬಳಿಕ, ಯುವಕರು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ಕೆಲ ಹೊತ್ತಿನ ಬಳಿಕ ಅವರನ್ನು ಬಿಟ್ಟು ಕಳುಹಿಸಿದ್ದರು. ವಿಷಯ ತಿಳಿದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ, ಯುವಕರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದರು. ನಂತರ, ಅವರೇ ಯುವಕರ ಮೂಲಕ ದೂರು ಕೊಡಿಸಿ ಸ್ಥಳೀಯರ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ.

‘ಸ್ನೇಹಿತರ ಭೇಟಿಯಾಗಲು ಬಂದಿದ್ದಾಗ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಪೊಲೀಸರೊಬ್ಬರು ಬೂಟಿನಿಂದ ಒದ್ದಿದ್ದಾರೆ’ ಎಂದು ಯುವಕರು ಆರೋಪಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಘಟನೆ ವೇಳೆ ಇಬ್ಬರು ಪೊಲೀಸರೂ ಸ್ಥಳದಲ್ಲಿದ್ದರು. ಅವರು ತಪ್ಪೆಸಗಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT