ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ ಟಾಪಿಂಗ್‌ಗೆ 4ಜಿ ವಿನಾಯಿತಿ!

ಯಡಿಯೂರಿನಲ್ಲಿ ₹7.49 ಕೋಟಿ ವೆಚ್ಚದಲ್ಲಿ 1.2 ಕಿ.ಮೀ. ಉದ್ದದ ರಸ್ತೆ ಕಾಮಗಾರಿ l ಟೆಂಡರ್‌ ಕರೆಯದೆ ಕೆಲಸ
Last Updated 26 ಸೆಪ್ಟೆಂಬರ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ವೈಟ್‌ ಟಾಪಿಂಗ್‌ ಕಾಮಗಾರಿಯ ತನಿಖೆ ನಡೆಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ನಗರ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌ ಅವರೇ, ಈ ಕಾಮಗಾರಿಗೆ 4ಜಿ ವಿನಾಯಿತಿ ನೀಡುವಂತೆ ಕೋರಿರುವ ಸಂಗತಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಪ್ರವಾಹ ಪರಿಹಾರದಂತಹ ತುರ್ತು ಕಾಮಗಾರಿಗಳಿಗಷ್ಟೇ 4ಜಿ ವಿನಾಯಿತಿ ಕೇಳಲಾಗುತ್ತದೆ. 4ಜಿ ವಿನಾಯಿತಿ ಸಿಕ್ಕರೆ ಟೆಂಡರ್‌ ಕರೆಯದೆ ಕಾಮಗಾರಿ ನಡೆಸಬಹುದು. ಆದರೆ, ಇಲ್ಲಿ ರಸ್ತೆ ಕಾಮಗಾರಿಗೆ ವಿನಾಯಿತಿ ಕೋರಿರುವುದು ಅಚ್ಚರಿಗೆ ಕಾರಣವಾಗಿದೆ.

‘ಯಡಿಯೂರು ವಾರ್ಡ್‌ ವ್ಯಾಪ್ತಿಯ ದ.ರಾ.ಬೇಂದ್ರೆ ವೃತ್ತದಿಂದ ಆರ್ಮುಗಂ ವೃತ್ತದ ವರೆಗಿನ ರಸ್ತೆಯು ಸುಮಾರು 1.2 ಕಿ.ಮೀ. ಉದ್ದವಿದೆ. ಈ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಸುವುದು ಅವಶ್ಯಕ. ಹೀಗಾಗಿ, ಲೋಕೋಪಯೋಗಿ ಇಲಾಖೆಯ 2018–19ನೇ ಸಾಲಿನ ದರ ಪಟ್ಟಿಯ ಹಾಗೂ ಅನುಮೋದಿತ ದರಗಳನ್ನು ಅಳವಡಿಸಿಕೊಂಡು ₹7.49 ಕೋಟಿ ವೆಚ್ಚದಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಈ ಕಾಮಗಾರಿಗಳನ್ನುತುರ್ತಾಗಿ ಕೈಗೊಳ್ಳಬೇಕಾಗಿರುವುದರಿಂದ 4 ಜಿ ವಿನಾಯಿತಿ ನೀಡಬೇಕು’ ಎಂದು ಗುತ್ತಿಗೆದಾರ ಸತೀಶ್‌ ಆರ್‌.ಎಂಬುವರು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಲ್ಲಿ ಕೋರಿದ್ದಾರೆ. ಈ ಪತ್ರವನ್ನು ರಮೇಶ್‌ ಅವರು ಮುಖ್ಯ ಕಾರ್ಯದರ್ಶಿಗೆ ನೀಡಿ ಒಪ್ಪಿಗೆ ನೀಡುವಂತೆ ವಿನಂತಿಸಿದ್ದಾರೆ. ‘ಇದು ಎನ್.ಆರ್‌.ರಮೇಶ್‌ ನೀಡಿದ್ದು’ ಎಂದು ಮುಖ್ಯ ಕಾರ್ಯದರ್ಶಿ ಇದೇ 21ರಂದು ಟಿಪ್ಪಣಿ ಬರೆದು ಆರ್ಥಿಕ ಇಲಾಖೆಗೆ ಕಳುಹಿಸಿದ್ದಾರೆ.

ವೈಟ್ ಟಾಪಿಂಗ್‌ ಕಾಮಗಾರಿಗಳ ಗುತ್ತಿಗೆ ಪಡೆದ ಮಧುಕಾನ್‌ ಪ್ರಾಜೆಕ್ಟ್ಸ್ ಲಿಮಿಟೆಡ್‌ ಹಾಗೂ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗೆ ಕಾಮಗಾರಿ ನಡೆಸುವ ಮುನ್ನವೇ ₹280 ಕೋಟಿ ಪಾವತಿಸಲಾಗಿದೆ ಎಂದು ರಮೇಶ್‌ ಆರೋಪಿಸಿದ್ದರು. ಆದರೆ, ಮುಖ್ಯ ಕಾರ್ಯದರ್ಶಿ ಅವರಿಗೆ ಮಧುಕಾನ್‌ ಸಂಸ್ಥೆ ಸಿದ್ಧಪಡಿಸಿದ ಅಂದಾಜುಪಟ್ಟಿ
ಯನ್ನೇ ನೀಡಿದ್ದಾರೆ.

ಮಧುಕಾನ್‌ ಸಂಸ್ಥೆ ಆಂಧ್ರಪ್ರದೇಶದಲ್ಲಿ ನಡೆಸಿದ ಕಾಮಗಾರಿಗಳಿಗೆ ವಿಶ್ವ ಬ್ಯಾಂಕ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ, ಈ ಸಂಸ್ಥೆಯು ಬೆಂಗಳೂರಿನಲ್ಲಿ ನಡೆಸಿದ ಕಾಮಗಾರಿಗಳನ್ನು ಪರಿಶೀಲನೆ ನಡೆಸುವುದು ಅಗತ್ಯ’ ಎಂದು ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ಸಂಸ್ಥೆ ನಡೆಸಿದ ಕಾಮಗಾರಿಗಳ ಪರಿಶೀಲನೆಯನ್ನು
15 ದಿನಗಳಲ್ಲಿ ಮಾಡಿಸಿ ವರದಿ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿ ಆಯುಕ್ತರಿಗೆ ಈ ವರ್ಷದ ಫೆಬ್ರುವರಿಯಲ್ಲಿ ಪತ್ರ ಬರೆದಿದ್ದರು. ಉತ್ತರ ನೀಡದ ಕಾರಣಕ್ಕೆ ಏಪ್ರಿಲ್‌ನಲ್ಲಿ ನೆನಪೋಲೆ ಕಳುಹಿಸಿದ್ದರು.

‘ಸಂಸ್ಥೆ ಬಗ್ಗೆ ರಮೇಶ್‌ ಹಲವಾರು ಬಾರಿ ಆರೋಪ ಮಾಡಿದ್ದಾರೆ. ಹಾಗಿದ್ದರೂ, ಈ ಸಂಸ್ಥೆ ನೀಡಿದ ಅಂದಾಜು
ಪಟ್ಟಿಯನ್ನು ನೀಡುವ ಅಗತ್ಯ ಏನಿತ್ತು’ ಎಂದು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಬಿಬಿಎಂಪಿ 2017–18ನೇ ಸಾಲಿನಲ್ಲಿ ₹690 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು ನಡೆಸಿದೆ. ಈ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ರಮೇಶ್‌ ಅವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದರು. ಕ್ಯಾಪ್ಟನ್‌ ಆರ್‌.ಆರ್‌.ದೊಡ್ಡಿಹಾಳ್‌ ನೇತೃತ್ವದಲ್ಲಿ ತಜ್ಞರ ಸಮಿತಿಯು ಕಾಮಗಾರಿಗಳ ಪರಿಶೀಲನೆ ಆರಂಭಿಸಿದೆ.

ಈ ನಡುವೆ, ವೈಟ್‌ ಟಾಪಿಂಗ್‌ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ತಡೆ ಒಡ್ಡಿದೆ. ‘ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ’ಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗೆ ₹50 ಕೋಟಿ ಮೀಸಲಿಡಲಾಗಿದೆ. ‘ಹಿಂದಿನ ಸರ್ಕಾರಗಳು ಪ್ರತಿ ಕಿ.ಮೀ. ಕಾಮಗಾರಿಗೆ ₹14 ಕೋಟಿಯಷ್ಟು ವೆಚ್ಚ ಮಾಡಿದ್ದವು. ರಮೇಶ್ ಅವರು ₹6 ಕೋಟಿ ವೆಚ್ಚದಲ್ಲಿ ಪ್ರತಿ ಕಿ.ಮೀ.ಯ ಕಾಮಗಾರಿ ನಡೆಸುವುದಾಗಿ ವಾಗ್ದಾನ ನೀಡಿದ್ದಾರೆ. ಹಾಗಾಗಿ, ಯಡಿಯೂರು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ‌ಕಾಮಗಾರಿಗಳನ್ನು ನಡೆಸಲು ಅನುಮೋದನೆ ನೀಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಒಂದು ಕಿ.ಮೀ ವೈಟ್‌ ಟಾಪಿಂಗ್ ಕಾಮಗಾರಿಯನ್ನು ₹ 4 ಕೋಟಿ ವೆಚ್ಚದಲ್ಲಿ ಮುಗಿಸಿ ತೋರಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗರ ಪ್ರದಕ್ಷಿಣೆ ವೇಳೆ ಸವಾಲು ಹಾಕಿದ್ದರು.

ವಿಳಂಬ ತಡೆಗೆ 4ಜಿ ವಿನಾಯಿತಿ ರಮೇಶ್‌ ಸಮರ್ಥನೆ

‘ಟೆಂಡರ್‌ ಶ್ಯೂರ್‌ ಕಾಮಗಾರಿಗೆ ಟೆಂಡರ್‌ ಕರೆದರೆ ವಿಳಂಬವಾಗುತ್ತದೆ. ಕೆಲವು ಸಲ ಗುತ್ತಿಗೆದಾರರು ಬರುವುದಿಲ್ಲ. ಹೀಗಾಗಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು 4 ಜಿ ವಿನಾಯಿತಿ ಕೋರಲಾಗಿದೆ. ಇದೇನೂ 8 ಜಿ ವಿನಾಯಿತಿ ಅಲ್ಲ’ ಎಂದು ಎನ್‌.ಆರ್‌.ರಮೇಶ್‌ ಸಮರ್ಥಿಸಿಕೊಂಡರು.

‘ಈ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಪ್ಪಿಗೆ ಸೂಚಿಸಿದ್ದಾರೆ. ವಿನಾಯಿತಿ ನೀಡಲು ಹಣಕಾಸು ಇಲಾಖೆ ಒಪ್ಪಿದೆ. ಕಡತ ಮುಖ್ಯಮಂತ್ರಿ ಅವರ ಬಳಿ ಇದ್ದು, ಅವರು ಸಹಿ ಹಾಕಿದ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾಮಗಾರಿಗೆ ಮುಂದಿನ ವಾರ ಗುದ್ದಲಿ ಪೂಜೆ ನೆರವೇರಿಸುತ್ತೇವೆ’ ಎಂದು ಅವರು ಹೇಳಿದರು.

‘ವಿನಾಯಿತಿ ಪಡೆದಾಗ ಟೆಂಡರ್‌ ಕರೆಯಬೇಕಿಲ್ಲ. ಇದರಿಂದ ಗುತ್ತಿಗೆದಾರರಿಗೂ ಅನುಕೂಲವಾಗುತ್ತದೆ. ಕಾಮಗಾರಿಗೆ ಘಟನೋತ್ತರ ಅನುಮೋದನೆ ಪಡೆಯಲಾಗುತ್ತದೆ’ ಎಂದು ಅವರು ಹೇಳಿದರು.

‘ನಾವು ವ್ಯವಸ್ಥಿತವಾಗಿ ಕಾಮಗಾರಿ ನಡೆಸುತ್ತೇವೆ. ಈ ರಸ್ತೆಯಲ್ಲಿ 8 ಮೀಟರ್‌ಗೊಂದು ಮಳೆ ನೀರು ಇಂಗು ಗುಂಡಿಯೂ ಇರಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT