ವೈಟ್‌ ಟಾಪಿಂಗ್‌ ಯೋಜನೆಯಲ್ಲಿ ಲೂಟಿ: ಯಡಿಯೂರಪ್ಪ ಆರೋಪ

7

ವೈಟ್‌ ಟಾಪಿಂಗ್‌ ಯೋಜನೆಯಲ್ಲಿ ಲೂಟಿ: ಯಡಿಯೂರಪ್ಪ ಆರೋಪ

Published:
Updated:
Deccan Herald

ಬೆಂಗಳೂರು: ‘ನಗರದಲ್ಲಿ ವೈಟ್‌ ಟಾಪಿಂಗ್‌ ಯೋಜನೆಯ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ನಗರದಲ್ಲಿ ಭಾನುವಾರ ನಡೆದ ‘ಬೆಂಗಳೂರು ಮಹಾನಗರ ಮಟ್ಟದ ಶಕ್ತಿ ಕೇಂದ್ರದ ಪ್ರಮುಖರ ಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಯೋಜನೆಗೆ ಬಿಬಿಎಂಪಿ ₹ 800 ಕೋಟಿಯ ಟೆಂಡರ್‌ ಕರೆದಿತ್ತು. ಆದರೆ, ₹60 ಕೋಟಿ ಬಿಡುಗಡೆ ಆಗಿದೆ. ಯಾವುದೇ ಕಾಮಗಾರಿ ಸರಿಯಾಗಿ ಆಗಿಲ್ಲ. ಇಷ್ಟೆಲ್ಲ ಆಗುತ್ತಿದ್ದರೂ, ಹೋರಾಟ ಮಾಡಿ ಕಿವಿ ಹಾಗೂ ಮೂಗು ಹಿಂಡುವ ಕೆಲಸವನ್ನು ನಾವು ಮಾಡಿಲ್ಲ. ಹೋರಾಟ ಮಾಡುವುದು ನಮಗೆ ಮರೆತೇಹೋಗಿದೆ. ಲೋಕಸಭಾ ಚುನಾವಣೆಗೆ ಎಂಟು ತಿಂಗಳುಗಳಷ್ಟೇ ಉಳಿದಿವೆ. ಸರಣಿ ಹೋರಾಟಗಳನ್ನು ನಡೆಸಿ ಚುನಾವಣೆಗೆ ಸಜ್ಜಾಗಬೇಕು’ ಎಂದು ಅವರು ಹೇಳಿದರು.

‘ಇಂದಿರಾ ಕ್ಯಾಂಟೀನ್‌ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಕಸ ವಿಲೇವಾರಿ ಹೆಸರಿನಲ್ಲಿ ನೂರಾರು ಕೋಟಿ ವ್ಯಯ ಮಾಡಲಾಗುತ್ತಿದೆ. ಆದರೆ, ಕಸದ ಸಮಸ್ಯೆ ಹಾಗೆಯೇ ಇದೆ. ಪೌರಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಮಾದಕ ದ್ರವ್ಯ ಸಾಗಣೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನಿತ್ಯ ಕೊಲೆ ಹಾಗೂ ಅತ್ಯಾಚಾರಗಳು ನಡೆಯುತ್ತಿವೆ. ಈ ಸರ್ಕಾರ ಬದುಕಿದೆಯಾ’ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌, ‘ಬೆಂಗಳೂರಿನ ಮತದಾರರ ಪಟ್ಟಿಯನ್ನು ಪಕ್ಷದ ಕಾರ್ಯಕರ್ತರು ಪರಿಶೀಲಿಸಬೇಕು. ಅಕ್ರಮ ವಲಸಿಗರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ಆರ್.ಅಶೋಕ್, ‘ಬಿಬಿಎಂಪಿಯ ಅನೇಕ ಬಿಜೆಪಿ ಸದಸ್ಯರು ಪಕ್ಷ ಸಂಘಟನೆಯಲ್ಲಿ ತೊಡಗಿಲ್ಲ. ಅಂತಹವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಿಲ್ಲ’ ಎಂದರು.

ಪ್ರಮುಖರ ಗೈರು: ಬೆಂಗಳೂರು ಉತ್ತರ ಸಂಸದರೂ ಆಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಶಾಸಕರಾದ ಅರವಿಂದ ಲಿಂಬಾವಳಿ, .ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ರಘು, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಮುನಿರಾಜು ಸಭೆಗೆ ಗೈರುಹಾಜರಾಗಿದ್ದರು.

‘ಡಿ.ವಿ.ಸದಾನಂದ ಗೌಡರ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಮುಖಂಡರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಬೆಂಗಳೂರು ದಕ್ಷಿಣ ಭಾಗದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ, ಉತ್ತರ ಭಾಗದ ಕುರಿತು ತಾರತಮ್ಯ ಅನುಸರಿಸಲಾಗುತ್ತಿದೆ. ಅಸಮಾಧಾನದ ಸಂದೇಶ ರವಾನಿಸಲು ಕೆಲವು ಮುಖಂಡರು ಸಭೆಗೆ ಗೈರುಹಾಜರಾಗಿದ್ದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !