ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯದಲ್ಲಿ ವೈಟ್‌ಫೀಲ್ಡ್‌ಗೆ ಮೆಟ್ರೊ ಸಂಪರ್ಕ

Last Updated 10 ಜನವರಿ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಸಂಪರ್ಕ ಕಲ್ಪಿಸುವ ಮೊಟ್ರೊ ರೈಲು ಮಾರ್ಗದ ಕಾಮಗಾರಿ ಚುರುಕುಗೊಂಡಿದ್ದು, 2022ರ ಡಿಸೆಂಬರ್ ವೇಳೆಗೆ ರೈಲುಗಳ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲು ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೊ ರೈಲು ನಿಗಮ) ಉದ್ದೇಶಿಸಿದೆ.

ರೀಚ್‌–1 ಮಾರ್ಗ ವಿಸ್ತರಿತ ಮಾರ್ಗ ಇದಾಗಿದ್ದು, ಈ ಮಾರ್ಗದ ಕಾಮಗಾರಿ ಪೂರ್ಣಗೊಂಡರೆ ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ನಿರಂತರ ಮೆಟ್ರೊ ಸಂಪರ್ಕ ದೊರೆತಂತಾಗಲಿದೆ. ನಗರದ ಅನೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವಲ್ಲಿ ಈ ಮೆಟ್ರೊ ಮಾರ್ಗ ಮಹತ್ತರ ಪಾತ್ರವಹಿಸಲಿದೆ.

‘ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ತನಕ 15.50 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ 14 ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಎತ್ತರಿಸಿದ ರೈಲು ಮಾರ್ಗದ ಸಿವಿಲ್ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಹಳಿಗಳ ಜೋಡಣೆ ಮತ್ತು ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೆಜ್ ತಿಳಿಸಿದರು.

‘ಕಾಮಗಾರಿ ಪೂರ್ಣಗೊಂಡು ವೈಟ್‌ಫೀಲ್ಡ್‌ ತನಕ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಡಬಲ್ ಡೆಕ್ಕರ್‌: ಒಂದೂವರೆ ವರ್ಷ ಕಾಯಬೇಕು

ರಾಗಿಗುಡ್ಡದಿಂದ ಸಿಲ್ಕ್‌ ಬೋರ್ಡ್ ಜಂಕ್ಷನ್‌ ತನಕದ ಡಬಲ್ ಡೆಕ್ಕರ್ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಕಾಯಬೇಕಿದೆ.

ಕೋವಿಡ್ ಸಂದರ್ಭದಲ್ಲಿ ಕೆಲಸ ಸ್ಥಗಿತಗೊಂಡಿದ್ದರಿಂದ ಮತ್ತು ಲಾಂಚರ್ ಕೆಳಗೆ ಜಾರಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಅಂಜುಂ ಪರ್ವೇಜ್ ಹೇಳಿದರು.

‘ಈ ಮಾರ್ಗದ ಮೆಟ್ರೊ ನಿಲ್ದಾಣಗಳ ಕಾಮಗಾರಿಗೆ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. 2023ರ ಜೂನ್‌ ವೇಳೆಗೆ ಕಾಮಗಾರಿ ಪೂರ್ಣಗೊಂಡು ರೈಲುಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT