ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಶ್ನಿಸಲು ನೀವು ಯಾರು: ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಪ್ರಶ್ನೆ

ಮೀಸಲಾತಿ ಕಸಿಯುವ ಪ್ರಯತ್ನ ನಡೆದರೆ ಹೋರಾಟ
Last Updated 6 ನವೆಂಬರ್ 2019, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಂವಿಧಾನ ನೀಡಿರುವ ಮೀಸಲಾತಿಯನ್ನು ಪ್ರಶ್ನೆ ಮಾಡಲು ನೀವು ಯಾರು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಮೀಸಲಾತಿ ನಿಲ್ಲಿಸುವಂತೆ ಒತ್ತಾಯಿಸುವವರನ್ನು ಪ್ರಶ್ನಿಸಿದರು.

ಬಿಬಿಎಂಪಿ ಬುಧವಾರ ಆಯೋಜಿಸಿದ್ದ ಡಾ. ಬಿ.ಆರ್‌. ಅಂಬೇಡ್ಕರ್ ಹಾಗೂ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು ಮೀಸಲಾತಿ ಕಲ್ಪಿಸಿದ್ದಾರೆ. ಆದರೂ, ಸಂಪೂರ್ಣ ಸವಲತ್ತುಗಳನ್ನು ಪಡೆದುಕೊಳ್ಳಲು ನಮ್ಮ ಸಮುದಾಯಕ್ಕೆ ಸಾಧ್ಯವಾಗಿಲ್ಲ. ಈ ನಡುವೆ ಇತರೆ ಸಮುದಾಯದವರು ಮೀಸಲಾತಿ ಮುಂದುವರಿಸಬೇಕೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆ ರೀತಿ ಪ್ರಶ್ನೆ ಮಾಡಲು, ಸಂವಿಧಾನದಲ್ಲಿ ಬಾಬಾ ಸಾಹೇಬರು ಕೊಟ್ಟಿರುವ ಅವಕಾಶ ಕಸಿದುಕೊಳ್ಳಲು ನೀವು ಯಾರು’ ಎಂದು ಪ್ರಶ್ನಿಸಿದರು.

‘ನಮಗೆ ಸಾಕು ಎಂದು ನಾವೇ ಹೇಳುವ ತನಕ ಮೀಸಲಾತಿ ಕಸಿದುಕೊಳ್ಳಲು ನಿಮ್ಮಿಂದ ಆಗುವುದಿಲ್ಲ. ಒಂದು ವೇಳೆ ಆ ರೀತಿಯ ಪ್ರಯತ್ನ ನಡೆದರೆ ಎಷ್ಟು ಬೇಕಾದರೂ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

‘ಸಂವಿಧಾನ ರಚನೆ ಸಂದರ್ಭದಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಪದಗಳನ್ನು ಅಂಬೇಡ್ಕರ್ ಹೇಳಿದ್ದರು. ನಮ್ಮ ಸಮುದಾಯದ ಜನರು ಇನ್ನೂ ಶಿಕ್ಷಣವನ್ನು ಸಂಪೂರ್ಣವಾಗಿ ಪಡೆದುಕೊಂಡಿಲ್ಲ, ಸಂಘಟಿತರೂ ಆಗಿಲ್ಲ. ಇನ್ನೂ ಹೋರಾಟ ಎಂಬುದು ನಿರಂತರವಾಗಿ ಇರಬೇಕಾಗುತ್ತದೆ. ಏಕೆಂದರೆ ಈ ಸಮುದಾಯವನ್ನು ತುಳಿಯುವ ಶಕ್ತಿಗಳು ಹೆಚ್ಚು ಪ್ರಭಾವಿಗಳು. ಅವರ ವಿರುದ್ಧ ಹೋರಾಟ ಮಾಡದಿದ್ದರೆ ಮುಂದೆ ಹೋಗಲು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಈ ಮೂರು ಪದಗಳು ಇಂದಿಗೂ ಅನ್ವಯವಾಗುತ್ತವೆ’ ಎಂದು ಅವರು ಪ್ರತಿಪಾದಿಸಿದರು.

‘₹ 2 ಸಾವಿರ ಬೋನಸ್ ನೀಡಬೇಕೆಂಬ ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವ ಬಗ್ಗೆ ಮೇಯರ್ ಅವರ ಜತೆಗೂಡಿ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಮೇಯರ್ ಎಂ.ಗೌತಮ್‌ಕುಮಾರ್ ಮಾತನಾಡಿ, ‘ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸಂಪರ್ಕವಾಗಿ ಮಾಡುತ್ತಿರುವ ಕಾರಣ ಜನಪ್ರತಿನಿಧಿಗಳಾದ ನಾವು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಇದಕ್ಕಾಗಿ ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ’ ಎಂದು ಹೇಳಿದರು.

ಮೆರವಣಿಗೆ: ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರು ನಗರದ ಎಂಟೂ ವಿಭಾಗದಿಂದ ಪಾಲಿಕೆ ಮುಖ್ಯ ಕಚೇರಿ ತನಕ ಮೆರವಣಿಗೆ ನಡೆಸಿದರು. ಅಲಂಕೃತ ವಾಹನಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತರು, ನಿವೃತ್ತಿಯ ಅಂಚಿನಲ್ಲಿರುವ ಮತ್ತು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದವರು ಸೇರಿ 275 ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸಚಿವರು, ಸಂಸದರು, ಶಾಸಕರು ಗೈರು
ಅಂಬೇಡ್ಕರ್ ಮತ್ತು ಪೌರ ಕಾರ್ಮಿಕರ ದಿನಾಚಣೆಗೆ ಯಾವುದೇ ಸಚಿವರಾಗಲಿ, ಶಾಸಕರಾಗಲೀ, ಸಂಸದರಾಗಲಿ ಭಾಗವಹಿಸಲಿಲ್ಲ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ, ವಸತಿ ಸಚಿವ ವಿ. ಸೋಮಣ್ಣ, ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಸೇರಿದಂತೆ ನಗರ ವ್ಯಾಪ್ತಿಯ ಎಲ್ಲಾ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರ ಹೆಸರನ್ನೂ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು.

ಪಾಲಿಕೆ ಸದಸ್ಯರನ್ನು ಬಿಟ್ಟು ಬೇರೆ ಜನಪ್ರತಿನಿಧಿಗಳು ಹಾಜರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT