ಶುಕ್ರವಾರ, ಆಗಸ್ಟ್ 19, 2022
27 °C
ರಾಜ್ಯ ಚುನಾವಣಾ ಆಯೋಗದ ವಿರುದ್ಧ ವಾಜಿದ್‌ ಆರೋಪ

ಕೇವಿಯಟ್‌ ಸಲ್ಲಿಸದೆ ಸರ್ಕಾರಕ್ಕೆ ಸಹಕಾರ; ವಾಜಿದ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ

ಬೆಂಗಳೂರು: ‘ಬಿಬಿಎಂಪಿಗೆ ಶೀಘ್ರವೇ ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶದ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ಮೊದಲೇ ತಿಳಿದಿದ್ದರೂ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿಲ್ಲ ಏಕೆ’ ಎಂದು ಕಾಂಗ್ರೆಸ್‌ ಮುಖಂಡ ಅಬ್ದುಲ್‌ ವಾಜಿದ್‌ ಪ್ರಶ್ನಿಸಿದ್ದಾರೆ.

‘ಒಂದು ತಿಂಗಳ ಒಳಗೆ ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಅದಾಗಿ ಆರು ವಾರಗಳ ಒಳಗೆ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಹೈಕೋರ್ಟ್‌ ಡಿ.4ರಂದು ಆದೇಶ ಮಾಡಿದೆ. ಅದರ ಪ್ರಕಾರ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯ ಚುನಾವಣಾ ಆಯೋಗದ ಕರ್ತವ್ಯ. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಕಂದಾಯ ಸಚಿವ ಆರ್‌.ಅಶೋಕ ಹೇಳಿಕೆ ನೀಡಿದ್ದರು. ಚುನಾವಣೆ ಮತ್ತಷ್ಟು  ವಿಳಂಬ ಆಗುವುದನ್ನು ತಪ್ಪಿಸಲು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ರಾಜ್ಯ ಸರ್ಕಾರಕ್ಕೆ ರಾಜ್ಯ ಚುನಾವಣಾ ಆಯೋಗವು ಪರೋಕ್ಷ ಸಹಕಾರ ನೀಡುತ್ತಿದೆ. ಸ್ವತಂತ್ರವಾಗಿ ನಿರ್ವಹಿಸಿಬೇಕಾದ ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ’ ಎಂದು ಅವರು ಆರೋಪಿಸಿದರು. 

‘ಬಿಬಿಎಂಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಹೈಕೋರ್ಟ್‌ ಆದೇಶ ನೀಡಿದ ಬಳಿಕವಾದರೂ ಸರ್ಕಾರ ಚುನಾವಣೆ ನಡೆಸಬೇಕಿತ್ತು. ಸರ್ಕಾರ ಏನೆಲ್ಲ ತಂತ್ರ ಹೂಡಿದರೂ ಅದಕ್ಕೆ ಸುಪ್ರೀಂ ಕೋರ್ಟ್‌ ಕೂಡ ಸೊಪ್ಪು ಹಾಕುವುದಿಲ್ಲ. ನಮಗೆ ಸುಪ್ರೀಂ ಕೋರ್ಟ್‌ನಲ್ಲೂ ನ್ಯಾಯ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು