ಶನಿವಾರ, ಜನವರಿ 25, 2020
16 °C
ವಿಶ್ವವಿದ್ಯಾಲಯಗಳಲ್ಲಿ ಹಿಂಸಾಚಾರ: ಉಪ ರಾಷ್ಟ್ರಪತಿ ಪ್ರಶ್ನೆ

ಕೆಲವು ವಿ.ವಿ.ಗಳು ಕೆಟ್ಟ ಕಾರಣಕ್ಕೆ ಸುದ್ದಿಯಾಗುವುದೇಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿ 900ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಆದರೂ, ಕೆಲವೇ ಕೆಲವು ವಿಶ್ವವಿದ್ಯಾಲಯಗಳು ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿರುವುದು ಏಕೆ’ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶ್ನಿಸಿದರು.

ಇಲ್ಲಿನ ರಾಜಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಮಿತಿಯ (ನ್ಯಾಕ್‌) ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ಹಾಗೂ ಅಲ್ಲಿನ ರಾಜಕೀಯದ ಕುರಿತು ಕಳವಳ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯಗಳ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಾಂಗಣದಿಂದ ರಾಜಕೀಯವನ್ನು ಹೊರಗಿಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

‘ವಿಶ್ವವಿದ್ಯಾಲಯಗಳು ಅಧ್ಯಯನ ಕೇಂದ್ರಗಳು. ಅಲ್ಲಿ ಯಾವುದೇ ಸಿದ್ಧಾಂತಗಳ ಕುರಿತು ಚರ್ಚಿಸುವುದು ತಪ್ಪಲ್ಲ. ಆದರೆ, ಅವುಗಳನ್ನು ಜಾರಿಗೆ ತರುವ ಕಾರ್ಯ ವಿಶ್ವವಿದ್ಯಾಲಯಗಳ ಪ್ರಾಂಗಣದ ಹೊರಗೆ ನಡೆಯಬೇಕೇ ಹೊರತು ಒಳಗಲ್ಲ’ ಎಂದರು.

ನವದೆಹಲಿಯ ಜಾಮಿಯಾ ಮಿಲಿಯ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ಹಿಂಸಾಚಾರ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ದೇಶದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆಯೂ ಉಪರಾಷ್ಟ್ರಪತಿ ಬೇಸರ ವ್ಯಕ್ತಪಡಿಸಿದರು. 

‘ದೇಶದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಿದೆ. ಸಂಖ್ಯೆ ಹೆಚ್ಚಾದರೂ ನಮ್ಮ ವಿಶ್ವವಿದ್ಯಾಲಯಗಳು ಗುಣಮಟ್ಟದಲ್ಲಿ ಸೊರಗಿವೆ. ಜಗತ್ತಿನ ಅಗ್ರ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮ್ಮವು ಇಲ್ಲ’ ಎಂದರು. 

ಬಿ ಮತ್ತು ಸಿ ದರ್ಜೆ ಶಿಕ್ಷಣ ಸಂಸ್ಥೆ ಮುಚ್ಚಿ

ನ್ಯಾಕ್‌ ಮೌಲ್ಯಮಾಪನದಲ್ಲಿ ಬಿ ಮತ್ತು ಸಿ ದರ್ಜೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಸರ್ಕಾರಕ್ಕೆ ನಿರ್ದೇಶನ ನೀಡಿದರು.

‘ಬಿ ಮತ್ತು ಸಿ ದರ್ಜೆಯನ್ನು ಪಡೆದಿರುವ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಬಗ್ಗೆ ಮರುಚಿಂತನೆ ನಡೆಸಬೇಕಾದ ಸಮಯ ಬಂದಿದೆ. ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ಯುವಜನರಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ವಿಫಲವಾದರೆ, ಅಂತಹವುಗಳನ್ನು ಮುಚ್ಚುವುದೇ ಒಳ್ಳೆಯದು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು