ಭಾನುವಾರ, ಅಕ್ಟೋಬರ್ 25, 2020
24 °C

ಅಗತ್ಯವಿದ್ದರೆ ಬಜೆಟ್‌ ಕಾಮಗಾರಿ ಮರುಪರೀಲನೆ: ಬಿಬಿಎಂಪಿ ಆಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಬಿಎಂಪಿಯ 2020–21ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗಳನ್ನು ಅಗತ್ಯ ಬಿದ್ದರೆ ಮರುಪರಿಶೀಲನೆ ನಡೆಸುತ್ತೇವೆ' ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.

ವಸಂತನಗರ ವಾರ್ಡ್‌ನ ನೋಡಲ್‌ ಅಧಿಕಾರಿಯೂ ಆಗಿರುವ ಅವರು ವಾರ್ಡ್‌ ಸಭೆಯಲ್ಲಿ ಶನಿವಾರ ಮಾತನಾಡಿದರು.

‘2020–21ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗಳ ಅವಶ್ಯಕತೆ ಇಲ್ಲ ಎಂದು ಕಂಡು ಬಂದರೆ ಅದರ ಬದಲು ಅಗತ್ಯ ಇರುವ ಬೇರೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಪರಿಶೀಲಿಸುತ್ತೇವೆ’ ಎಂದರು.

ವಾರ್ಡ್‌ನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳ ಅಹವಾಲು ಆಲಿಸಿದ ಅವರು ವಾರ್ಡ್‌ನ ಪ್ರಮುಖ ಸಮಸ್ಯೆಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕವೂ ಪ್ರತಿಕ್ರಿಯೆ ಪಡೆದರು. ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸ್ಥಳೀಯರು ಗಮನ ಸೆಳೆದರು. 

ಹಾಜರಾತಿ ಹಾಕುವುದಕ್ಕೆ ನಿಗದಿಪಡಿಸಿರುವ ಸ್ಥಳಕ್ಕೆ ಬಂದು ಹೋಗುವಾಗ ಪೌರಕಾರ್ಮಿಕರ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ದೂರಿದರು. ವಾರ್ಡ್‌ನಲ್ಲಿ ಶೇ 65ರಷ್ಟು ಕಸ ಮೂಲದಲ್ಲೇ ವಿಂಗಡಣೆ ಆಗುತ್ತಿದೆ. ಕೆಲವು ಕಡೆ ಪೌರಕಾರ್ಮಿಕರೇ ಕಸವನ್ನು ವಿಂಗಡಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದರು. 

ವಾರ್ಡ್‌ನಲ್ಲಿ ಬಳಕೆಯಾಗುತ್ತಿರುವ ಆಟೊ ಟಿಪ್ಪರ್‌ಗಳ ಬಗ್ಗೆ ಹಾಗೂ ಅವು ಕಸ ಸಂಗ್ರಹಿಸುವ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಬಳಗಗಳ ಮೂಲಕ ಹಂಚಿಕೊಳ್ಳುವಂತೆ ಅಧಿಕಾರಿಗಳಿಗೆ ಆಯುಕ್ತರು ಸಲಹೆ ನೀಡಿದರು. 

ಬೀದಿದೀಪ ನಿರ್ವಹಣೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, ‌ಪಾದಚಾರಿ ಮಾರ್ಗಗಳ ನಿರ್ವಹಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು