ಭಾನುವಾರ, ಜುಲೈ 25, 2021
27 °C
ಬಗೆಹರಿಯದ ಭೂಸ್ವಾಧೀನ ಸಮಸ್ಯೆ

ಕೆಂಪೇಗೌಡ ಬಡಾವಣೆ l ರಸ್ತೆ ಗೊಂದಲಕ್ಕೆ ಮುಕ್ತಿ ಎಂದು?

ಪ್ರವೀಣ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕೆಲವು ಬ್ಲಾಕ್‌ಗಳು ಸಂಪರ್ಕ ರಸ್ತೆ ಹಾದು ಹೋಗಬೇಕಾದ ಕಡೆ ಇನ್ನೂ ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹಾಗಾಗಿ ಸಂಪರ್ಕ ರಸ್ತೆ ನಿರ್ಮಾಣ ಸಾಧ್ಯವಾಗದೇ ಕೆಲವು ನಿವೇಶನಗಳು ದ್ವೀಪಗಳಂತಾಗಿವೆ.

‘ಬಡಾವಣೆಯ ಎಲ್ಲಾ ಬ್ಲಾಕ್‌ಗಳಲ್ಲೂ ಸಂಪರ್ಕ ರಸ್ತೆಗಳ ಸಮಸ್ಯೆ ಇದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು, ಸಮಸ್ಯೆ ಇಲ್ಲದ ಕಡೆ ಮಾತ್ರ ಬಿಡಿಎ ಮೂಲಸೌಕರ್ಯ ಕಲ್ಪಿಸುತ್ತಿದೆ. ಅನೇಕ ರಸ್ತೆಗಳು ಏಕಾಏಕಿ ಸ್ಥಗಿತವಾಗುತ್ತವೆ. ಅಲ್ಲಿಂದ ನಮ್ಮ ನಿವೇಶನ ತಲುಪಲು ಅರ್ಧ ಕಿ.ಮೀ ಸುತ್ತಿಕೊಂಡು ಸಾಗಬೇಕಾದ ಸ್ಥಿತಿ ಇದೆ’ ಎಂದು ಪರಿಸ್ಥಿತಿಯನ್ನು ವಿವರಿಸುತ್ತಾರೆ ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಎ.ಎಸ್‌.ಸೂರ್ಯಕಿರಣ್.

‘ಸಣ್ಣಪುಟ್ಟ ಸಂಪರ್ಕ ರಸ್ತೆಗಳು ಬಿಡಿ, ಈ ಬಡಾವಣೆ ಮೂಲಕ ಹಾದು ಹೋಗುವ 100 ಮೀ ಅಗಲದ ರಸ್ತೆ ಕಾರಿಡಾರ್‌ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಈ ಕಾಮಗಾರಿಯನ್ನು ಅರ್ಧಂಬರ್ಧ ನಡೆಸಲಾಗಿದೆ’ ಎಂದು ಅವರು ವಿವರಿಸಿದರು.

ಕೆಲವೆಡೆ ಭೂಮಾಲೀಕರ ವಿರೋಧದಿಂದಾಗಿ ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲವಾದರೆ, ಇನ್ನು ಕೆಲವೆಡೆ ಸ್ಥಳೀಯರು ಜಾಗ ನೀಡಲು ಸಿದ್ಧವಿದ್ದರೂ ಬಿಡಿಎ ಕಡೆಯಿಂದಲೇ ವಿಳಂಬವಾಗಿದೆ.

‘ಯಾವ ಬ್ಲಾಕ್‌ನಲ್ಲಿ ಸಂಪರ್ಕ ರಸ್ತೆಗಾಗಿ ಎಲ್ಲೆಲ್ಲಿ ಮತ್ತೆ ಭೂ ಸ್ವಾಧೀನ ನಡೆಸಬೇಕಾಗುತ್ತದೆ ಎಂಬ ಬಗ್ಗೆ ನಾವು ಎರಡು ವರ್ಷಗಳ ಹಿಂದೆಯೇ ವಿಸ್ತೃತವಾದ ವರದಿಯನ್ನು ಸಿದ್ಧಪಡಿಸಿದ್ದೆವು. ಆದರೆ, ಅದಕ್ಕೆ ಇನ್ನೂ ಬಿಡಿಎ ಆಡಳಿತ ಮಂಡಳಿ ಸಭೆಯ ಅನುಮತಿ ಸಿಕ್ಕಿಲ್ಲ’ ಎಂದು ಬಿಡಿಎ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಶೀಘ್ರವೇ ರಸ್ತೆಗಳನ್ನು ನಿರ್ಮಿಸಬಹುದು. ರಸ್ತೆ ನಿರ್ಮಾಣ ವಿಳಂಬವಾದರೆ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಪ್ರಕ್ರಿಯೆಯೂ ತಡವಾಗುತ್ತದೆ. ಇಂದು ನಡೆಯುವ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಾದರೂ ಈ ಪ್ರಸ್ತಾವಕ್ಕೆ ಮಂಜೂರಾತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ವಿವರಿಸಿದರು.

‘ಬಡಾವಣೆಗೆ ಭೂಮಿ ಬಿಟ್ಟುಕೊಟ್ಟರೆ ನಂತರ ಪರಿಹಾರ ನೀಡಲು ಹಾಗೂ ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು ಸತಾಯಿಸುತ್ತಾರೆ ಎಂಬ ಕಾರಣಕ್ಕೆ ರೈತರು ಆರಂಭದಲ್ಲಿ ಆತಂಕಗೊಂಡಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಸಂಪರ್ಕ ರಸ್ತೆಗಳಿಗೆ ಭೂಮಿ ನೀಡಲು ರೈತರು ಮುಂದೆ ಬಂದರೂ ಬಿಡಿಎ ಅಧಿಕಾರಿಗಳೇ ನಿರಾಸಕ್ತಿ ತೋರಿಸುತ್ತಿದ್ದಾರೆ’ ಎಂದು ಸ್ಥಳೀಯ ಭೂಮಾಲೀಕ ಪ್ರಶಾಂತ್‌ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು