ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಅಂತರ ನಿರ್ಧಾರವಷ್ಟೇ ಬಾಕಿ ಇದೆ: ಬಿ.ಎಸ್‌. ಯಡಿಯೂರಪ್ಪ

ಆರ್‌.ಆರ್‌. ನಗರ: ವರ್ಚುವಲ್‌ ಸಂವಾದದಲ್ಲಿ ಬಿ.ಎಸ್‌. ಯಡಿಯೂರಪ್ಪ
Last Updated 31 ಅಕ್ಟೋಬರ್ 2020, 7:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸುವುದು ಈಗಾಗಲೇ ಖಚಿತವಾಗಿದೆ. ಗೆಲುವಿನ ಅಂತರ ನಿರ್ಧಾರ ಮಾತ್ರ ಬಾಕಿ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬಿಜೆಪಿ ರಾಜ್ಯ ಘಟಕ ಶನಿವಾರ ಆಯೋಜಿಸಿದ್ದ ವರ್ಚುವಲ್‌ ಸಂವಾದದಲ್ಲಿ ಮಾತನಾಡಿದ ಅವರು, ‘ಮುನಿರತ್ನ ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಇಲ್ಲಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಜನಪ್ರಿಯ ವ್ಯಕ್ತಿ. ಅವರ ಕುರಿತು ವಿರೋಧ ಪಕ್ಷಗಳ ಮುಖಂಡರು ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನಿರತ್ನ ಅವರನ್ನು ಗೆಲ್ಲಿಸುವ ಮೂಲಕ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಸರಿಯಾದ ಉತ್ತರ ನೀಡಲಿದ್ದಾರೆ’ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಜಯ ಸಾಧಿಸಿದೆ. ನಂತರ ನಡೆದ ಉಪ ಚುನಾವಣೆಯಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ದೊರಕಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಎರಡೂ ಪಕ್ಷಗಳಿಗೆ ಸೋಲು ಖಚಿತ ಎಂದು ಹೇಳಿದರು.

ಮಾತು ನಡೆಸಿಕೊಡಿ: ‘ವಿಧಾನಸಭೆಯ ಅಧಿವೇಶನದ ಕೊನೆ ದಿನಗಳಲ್ಲಿ ವಿರೋಧ ಪಕ್ಷದ ನಾಯಕರು ಹಗುರವಾಗಿ ಮಾತನಾಡಿದ್ದರು. ಮುಂದಿನ ಯಾವ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲಲು ಬಿಡುವುದಿಲ್ಲ ಎಂದು ಆ ದಿನವೇ ವಿಧಾನಸಭೆಯಲ್ಲಿ ಹೇಳಿದ್ದೇನೆ. ಈ ಕ್ಷೇತ್ರದಲ್ಲಿ ಮುನಿರತ್ನ ಅವರನ್ನು ಗೆಲ್ಲಿಸುವ ಮೂಲಕ ಮತದಾರರು ನನ್ನ ಮಾತನ್ನು ನಡೆಸಿಕೊಡಬೇಕು’ ಎಂದು ಯಡಿಯೂರಪ್ಪ ಮನವಿ ಮಾಡಿದರು.

ತಿಂಗಳ ಗಡುವು:‘ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಗರದ ರಸ್ತೆಗಳ ಗುಂಡಿ ಮುಚ್ಚಲು ಒಂದು ತಿಂಗಳ ಗಡುವುದು ನೀಡಿದ್ದೇನೆ. ನಗರದಲ್ಲಿ ಮಳೆ ಸುರಿದಾಗ ಪ್ರವಾಹ ಸೃಷ್ಟಿಯಾಗಿ ಜನರಿಗೆ ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ. ಮೂರು ತಿಂಗಳೊಳಗೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ತಮ್ಮ ಅವಧಿಯಲ್ಲಿ 821 ಕೋಟಿಯಷ್ಟು ಅನುದಾನ ನೀಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಬೆಂಗಳೂರಿನಲ್ಲಿ ಮೆಟ್ರೊ ರೈಲು ಸಂಪರ್ಕ ವಿಸ್ತರಣೆ, ಹೊರ ವರ್ತುಲ ರಸ್ತೆ ನಿರ್ಮಾಣ ಮತ್ತು ಉಪ ನಗರ ರೈಲು ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆ.ಜಿ.ಹಳ್ಳಿ, ಡಿ.ಜೆ. ಹಳ್ಳಿ ಆಗಬಾರದು: ಅಭ್ಯರ್ಥಿ ಮುನಿರತ್ನ ಮಾತನಾಡಿ, ‘ರಾಜರಾಜೇಶ್ವರಿನಗರ ಕ್ಷೇತ್ರ ಮತ್ತೊಂದು ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಆಗಬಾರದು. ಕಾಂಗ್ರೆಸ್‌ ಪಕ್ಷದವರು ಸ್ವಾರ್ಥಕ್ಕಾಗಿ ಅಲ್ಲಿ ಗಲಭೆ ಮಾಡಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಅಂತಹ ಸ್ಥಿತಿ ನಿರ್ಮಾಣ ಆಗಬಾರದು. ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

‘ನಾವು ಸ್ವಾರ್ಥಕ್ಕಾಗಿ ಪಕ್ಷ ತ್ಯಜಿಸಲಿಲ್ಲ. ಅಭಿವೃದ್ಧಿ ಕಾರ್ಯದ ನಿರೀಕ್ಷೆ ಇರಿಸಿ ಜನರು ನಮ್ಮನ್ನು ಆಯ್ಕೆ ಮಾಡಿದ್ದರು. ಆಡಳಿತ ಪಕ್ಷದಲ್ಲಿದ್ದರೂ ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿರಲಿಲ್ಲ. ಆ ಪಕ್ಷವದರು ಮಾಡಿದ ತಪ್ಪಿನಿಂದಾಗಿ ಹೊರ ಬಂದೆವು. ಅವರು ನಮ್ಮತ್ತ ಬೆರಳು ತೋರುವ ಮೊದಲು ತಮ್ಮನ್ನು ತಾವು ಸರಿಪಡಿಸಿಕೊಳ್ಳಲಿ’ ಎಂದರು.

ಸಚಿವರಾದ ಆರ್‌. ಅಶೋಕ, ಬೈರತಿ ಬಸವರಾಜ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಶಾಸಕರಾದ ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT