’ವಿಸ್ಟ್ರಾನ್ ಘಟನೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ’

ಬೆಂಗಳೂರು: ಕೋಲಾರ ಜಿಲ್ಲೆಯ ವಿಸ್ಟ್ರಾನ್ ಕಂಪನಿಯಲ್ಲಿ ಆಗಿರುವ ಅಹಿತಕರ ಘಟನೆ ಮರುಕಳಿಸದಂತೆ ಬಿಗಿ ಕ್ರಮ ಕೈಗೊಳ್ಳುವುದರ ಜತೆಗೆ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಶಾಂತಿಪ್ರಿಯ ರಾಜ್ಯವಾಗಿರುವ ಕಾರಣಕ್ಕೆ ವಿದೇಶಿ ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದು ಸ್ನೇಹಕರ ವಾತಾವರಣದಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಈ ಕಂಪನಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ‘ವಿಸ್ಟ್ರಾನ್‌ನಲ್ಲಿ ನಡೆದ ಘಟನೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕಾರ್ಖಾನೆಯ ವಿರುದ್ಧ ದಾಳಿ ನಡೆಸಿ ಅದರ ಆಸ್ತಿ ನಷ್ಟಕ್ಕೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಇಡೀ ಘಟನೆಗೆ ಕಾರಣವೇನು? ಕಾರ್ಮಿಕರು ಯಾಕೆ ಆಕ್ರೋಶಕ್ಕೆ ಒಳಗಾದರು? ಬೆಳಿಗ್ಗೆ ಪಾಳಿ ಬದಲಾವಣೆ ಸಮಯದಲ್ಲಿ ಸೃಷ್ಟಿಯಾದ ಪರಿಸ್ಥಿತಿ ಏನು? ಯಾರಾದರೂ ಪ್ರಚೋದನೆ ಮಾಡಿದ್ದರಾ ಎಂಬಿತ್ಯಾದಿ ಸಂಗತಿಗಳ ಬಗ್ಗೆಯೂ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ’ ಎಂದೂ ಅವರು ಹೇಳಿದ್ದಾರೆ.
‘ಕಾರ್ಮಿಕರಿಗೆ ವೇತನ ನೀಡಿಲ್ಲ ಅಥವಾ ವೇತನ ಕಡಿತ ಮಾಡಿ ನೀಡಲಾಗುತ್ತಿತ್ತು ಎಂಬ ಅಂಶಗಳ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಕಾರ್ಮಿಕರಿಗೆ ಅಂಥ ಸಮಸ್ಯೆ ಇದ್ದರೆ ಕಾರ್ಮಿಕ ಆಯುಕ್ತರಿಗೆ ದೂರು ನೀಡಬಹುದಿತ್ತು ಅಥವಾ ಜಿಲ್ಲಾಧಿಕಾರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.