ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣ ಪ್ರಯಾಸವಾಗಿಸುವ ರಸ್ತೆ ಉಬ್ಬುಗಳು

Last Updated 28 ಮೇ 2018, 10:58 IST
ಅಕ್ಷರ ಗಾತ್ರ

ಹೊಳೆನರಸೀಪುರ: ಇಲ್ಲಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಇರುವ ರಸ್ತೆಯ ಉಬ್ಬುಗಳು (ರೋಡ್‌ ಹಂಪ್‌) ಪ್ರಯಾಣವನ್ನು ಪ್ರಯಾಸದಾಯಕವಾಗಿಸುತ್ತಿವೆ.

ಈ ರಸ್ತೆಯಲ್ಲಿ ಹಲವೆಡೆ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಹಾಕಿದ್ದು ವಾಹನಗಳ ಸವಾರರಿಗೆ, ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ. ಕೆಲವೊಮ್ಮೆ ರಸ್ತೆ ಉಬ್ಬು ಕಾಣದೆ ಹತ್ತಿರ ಹೋಗಿ ಬ್ರೇಕ್‌ ಹಾಕಿ ಹಿಂದಿನಿಂದ ವಾಹನಗಳು ಡಿಕ್ಕಿ ಹೊಡೆದಿವೆ.

ಅಪಘಾತ ನಿಯಂತ್ರಿಸಲು ಹಾಕಿರುವ ರಸ್ತೆ ಉಬ್ಬುಗಳೇ ಅಪಘಾತಕ್ಕೆ ಕಾರಣವಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ರಸ್ತೆ ಉಬ್ಬುಗಳನ್ನು ಎಷ್ಟು ಎತ್ತರಕ್ಕೆ ಹಾಕಬೇಕು, ಎಲ್ಲಿ ಹಾಕಬೇಕು, ಹಾಕಿದ ನಂತರ ಯಾವ ಸೂಚನೆಗಳನ್ನು ಅಳವಡಿಸಬೇಕು ಎನ್ನುವ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಸವಾರರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನ ದೊಡ್ಡಹಳ್ಳಿ ಸಮೀಪ ಎರಡು ರಸ್ತೆ ಉಬ್ಬು ಹಾಕಿದ್ದು, ಬಣ್ಣ ಬಳಿದಿಲ್ಲ. ರಸ್ತೆ ಉಬ್ಬು ಕಾಣುವುದಿಲ್ಲ. ಹತ್ತಿರ ಬಂದಾಗ ವಾಹನ ನಿಲ್ಲಿಸಲಾಗದೆ ಅನೇಕರು ತೊಂದರೆಗೆ ಒಳಗಾಗಿದ್ದಾರೆ.

ಇದೇ ಮಾರ್ಗದ ಬಿಳಿಕೆರೆ ಸಮೀಪ 7 ಕಡೆ ಒಂದೇ ಜಾಗದಲ್ಲಿ 1 ಅಡಿ ಅಂತರದಲ್ಲಿ 15 ಉಬ್ಬುಗಳನ್ನು ಹಾಕಿದ್ದಾರೆ. ಈ ರಸ್ತೆ ಉಬ್ಬುಹಾಕಿದ ನಂತರ ವಾಹನಗಳ ಓಡಾಟಕ್ಕೆ ಹಾಗೂ ಪ್ರಯಾಣಿಕರಿಗೆ ತೀವ್ರ ತೊಂದರೆ ಆಗಿದೆ.

ಈ ಮಾರ್ಗದಲ್ಲಿ ಮೈಸೂರಿಗೆ ಪ್ರತಿದಿನ ಓಡಾಡುವ ಅನೇಕ ನೌಕರರಿಗೆ ಬೆನ್ನುಹುರಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಇಲ್ಲಿನ ಕಾಲೇಜೊಂದರ ಉಪನ್ಯಾಸಕ ಗುರುರಾಜ್‌ ದೂರಿದ್ದಾರೆ.

ಯಾವುದೇ ತಿರುವು, ಶಾಲೆ, ಊರು ಇಲ್ಲದ ಕಡೆಯೂ ಅನವಶ್ಯಕವಾಗಿ ರಸ್ತೆ ಉಬ್ಬು ಹಾಕಿದ್ದಾರೆ. ಅಗತ್ಯ ಇಲ್ಲದೆಡೆ ಅವೈಜ್ಞಾನಿಕವಾಗಿರುವ ರಸ್ತೆ ಉಬ್ಬುಗಳಿಗೆ ಕೆಂಪು ರಿಫ್ಲೆಕ್ಟರ್‌ ಅಳವಡಿಸಬೇಕು ಎಂದು ಜನರು ಮನವಿ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಹೊಳೆನರಸೀಪುರದ ಜನಸ್ಪಂದನ ವೇದಿಕೆ ಸದಸ್ಯರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT