ಶುಕ್ರವಾರ, ಡಿಸೆಂಬರ್ 4, 2020
22 °C

ನಗ್ನವಾಗಿ ಕರೆ ಮಾಡಿದ್ದ ಯುವತಿ; ಬ್ಲ್ಯಾಕ್‌ಮೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗ್ನವಾಗಿ ವ್ಯಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕರೆ ಮಾಡಿದ್ದ ಯುವತಿಯೊಬ್ಬರು ನಗರದ ನಿವಾಸಿಯೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬ್ಲ್ಯಾಕ್‌ಮೇಲ್ ಸಂಬಂಧ 38 ವರ್ಷದ ವ್ಯಕ್ತಿ ದೂರು ನೀಡಿದ್ದಾರೆ. ರಿಯಾ ಎಂಬಾಕೆ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಖಾಸಗಿ ಕಂಪನಿಯೊಂದರ ನೌಕರ. ಕೆಲ ದಿನಗಳ ಹಿಂದೆ ಅವರಿಗೆ ಫೇಸ್‌ಬುಕ್‌ನಲ್ಲಿ ರಿಯಾ ಪರಿಚಯವಾಗಿತ್ತು. ವಸ್ತ್ರವಿನ್ಯಾಸಕಿ ಎಂದು ಆಕೆ ಹೇಳಿದ್ದಳು. ವಿನ್ಯಾಸ ಮಾಡಿರುವ ಬಟ್ಟೆಗಳನ್ನು ಕಳುಹಿಸುವುದಾಗಿ ಹೇಳಿ ಮೊಬೈಲ್ ನಂಬರ್ ಪಡೆದಿದ್ದಳು.’

‘ಅ. 28ರಂದು ದೂರುದಾರರಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿದ್ದ ಯುವತಿ, ನಗ್ನವಾಗಿ ಕಾಣಿಸಿಕೊಂಡಿದ್ದಳು. ಅಸಭ್ಯವಾಗಿ ವರ್ತಿಸಿದ್ದಳು. ಗಾಬರಿಗೊಂಡ ದೂರುದಾರ, ಕರೆ ಕಡಿತಗೊಳಿಸಿದ್ದರು. ಪುನಃ ಕರೆ ಮಾಡಿದ್ದ ಯುವತಿ, ವಿಡಿಯೊ ರೆಕಾರ್ಡ್ ಮಾಡಿಕೊಂಡಿರುವುದಾಗಿ ಹೇಳಿದ್ದಳು. ₹ 21 ಸಾವಿರ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ದೂರುದಾರರು ಹಣ ನೀಡಲು ಒಪ್ಪಿರಲಿಲ್ಲ. ಅವರ ಸ್ನೇಹಿತರೊಬ್ಬರಿಗೆ ಯುವತಿ ವಿಡಿಯೊ ಕಳುಹಿಸಿದ್ದಾಳೆ’ ಎಂದೂ ಹೇಳಿದರು.

ಕೇಂದ್ರ ವಿಭಾಗದಲ್ಲಿ ಸಿ.ಸಿ.ಟಿ.ವಿ ಕಣ್ಗಾವಲು

ಬೆಂಗಳೂರು: ನಗರದ ಹೃದಯಭಾಗದ ಪ್ರದೇಶಗಳನ್ನು ಹೊಂದಿರುವ ಕೇಂದ್ರ ವಿಭಾಗ ವ್ಯಾಪ್ತಿಯಲ್ಲಿ ಅಪರಾಧಗಳ ಮೇಲೆ ನಿಗಾ ವಹಿಸಲು ಮತ್ತಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವಿಧಾನಸೌಧ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರ, ಯುಬಿ ಸಿಟಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 110 ಗುಣಮಟ್ಟದ ಕ್ಯಾಮೆರಾಗಳನ್ನು ಹಾಕಲಾಗಿದೆ. ಮಾಲ್‌, ಪಬ್‌ ಎದುರು, ಸಾರ್ವಜನಿಕರ ಸ್ಥಳ, ಜನರು ಹೆಚ್ಚು ಸೇರುವ ಜಾಗಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಆಯಾ ಠಾಣೆಗಳಲ್ಲಿ ಟಿ.ವಿ ಅಳವಡಿಸಲಾಗಿದ್ದು, ಅಲ್ಲಿಯೇ ಕ್ಯಾಮೆರಾಗಳ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.

ಮಕ್ಕಳು, ಮಹಿಳೆಯರ ರಕ್ಷಣೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ಕ್ಯಾಮೆರಾಗಳನ್ನು ಪೊಲೀಸರು ಬಳಸಲಿದ್ದಾರೆ. ಈ ಕ್ಯಾಮೆರಾಗಳ ಕಾರ್ಯಕ್ಕೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಶುಕ್ರವಾರ ಚಾಲನೆ ನೀಡಿದರು.

‘ಅಪರಾಧ ತಡೆಗೂ ಕ್ಯಾಮೆರಾಗಳು ಸಹಕಾರಿ’ ಎಂದು ಕಮಲ್ ಪಂತ್ ಹೇಳಿದರು. ಹೆಚ್ಚುವರಿ ಕಮಿಷನರ್ ಸೌಮೇಂದು ಮುಖರ್ಜಿ, ಡಿಸಿಪಿ ಎಂ.ಎನ್. ಅನುಚೇತ್ ಇದ್ದರು.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ₹ 2 ಲಕ್ಷ ಜಪ್ತಿ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಿರಣ್ ಜೈನ್ ಹಾಗೂ ದುಂಗರ್ ಚಂದ್ ಬಂಧಿತರು. ಅವರಿಂದ ₹ 2 ಲಕ್ಷ ನಗದು ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಸೋಲು–ಗೆಲುವು ಲೆಕ್ಕಾಚಾರದಲ್ಲಿ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದರು. ಮೊಬೈಲ್‌ನಲ್ಲಿ ಜನರನ್ನು ಸಂಪರ್ಕಿಸಿ ಹಣ ಕಟ್ಟಿಸಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು