ಶುಕ್ರವಾರ, ಡಿಸೆಂಬರ್ 6, 2019
21 °C

ಸರ ದರೋಡೆ ,ಮಾಡಿದ್ದ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಿಳೆ ತಲೆಗೆ ಗುದ್ದಿ ಚಿನ್ನದ ಸರವನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

‘ಯಶವಂತಪುರದ ದಾವೂದ್ ಇಬ್ರಾಹಿಂ (21) ಹಾಗೂ ರೋಷನ್ ಅಲಿಯಾಸ್ ಅಬ್ದುಲ್ ಸುಬಾನ್ (20) ಬಂಧಿತರು. ₹ 2.5 ಲಕ್ಷ ಮೌಲ್ಯದ 15 ಗ್ರಾಂ ಚಿನ್ನಾಭರಣ, 6 ಮೊಬೈಲ್ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನ. 18ರಂದು ಬೆಳಿಗ್ಗೆ ಮಮತಾ ಸಿಂಗ್ ಎಂಬುವರು ಜೆ.ಪಿ.ಉದ್ಯಾನ ಬಳಿಯ ಇಂದಿರಾ ಕ್ಯಾಂಟೀನ್ ಬಳಿ ಹೊರಟಿದ್ದರು. ಬೈಕ್‍ನಲ್ಲಿ ಬಂದಿದ್ದ ಆರೋಪಿಗಳು ಮಮತಾ ಅವರ ತಲೆಗೆ 6 ಬಾರಿ ಗುದ್ದಿ, 20 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದರು.

ಸುಲಿಗೆಯಲ್ಲೂ ಭಾಗಿ: ‘ಇದೇ ಆರೋಪಿಗಳು ಯಶವಂತಪುರ ಎಸ್‌ಬಿಎಂ ಕಾಲೊನಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಜೀವ ಬೆದರಿಕೆಯೊಡ್ಡಿ ಮೊಬೈಲ್ ಕಿತ್ತುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.  

‘ಇವೆರಡೂ ಪ್ರಕರಣಗಳ ಸಂಬಂಧ ದೂರು ದಾಖಲಾಗಿತ್ತು. ಇನ್ನೊಂದು ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ವೇಳೆಯಲ್ಲೇ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಐಷಾರಾಮಿ ಜೀವನಕ್ಕೆ ಹಣ ಹೊಂದಿಸಲು ಆರೋಪಿಗಳು ಕೃತ್ಯ ಎಸಗುತ್ತಿದ್ದರು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು