ಕಬ್ಬನ್ ಪಾರ್ಕ್‌ನಲ್ಲಿ ಯುವತಿ ಆತ್ಮಹತ್ಯೆ

7

ಕಬ್ಬನ್ ಪಾರ್ಕ್‌ನಲ್ಲಿ ಯುವತಿ ಆತ್ಮಹತ್ಯೆ

Published:
Updated:

ಬೆಂಗಳೂರು: ತನ್ನನ್ನು ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದರಿಂದ ಬೇಸರಗೊಂಡು ನೇಪಾಳದ ಯುವತಿಯೊಬ್ಬರು ಕಬ್ಬನ್‌ಪಾರ್ಕ್‌ನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಂದೆ ಕಬಿರಾಜ್ ಥಾಪಾ ಜತೆ ನಗರದ ಡಿಸೋಜಾ ಲೇಔಟ್‌ನಲ್ಲಿ ನೆಲೆಸಿದ್ದ ಸಂತೋಷಿ ಥಾಪ (21) ಮೃತರು. ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದಡಿ ಪ್ರಿಯಕರ ಆರ್‌.ಟಿ.ನರೇಶ್ ಎಂಬಾತನನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

ಸಂತೋಷಿ ಹಾಗೂ ನರೇಶ್ ಮೊದಲು ಒಂದೇ ‘ಸ್ಪಾ’ದಲ್ಲಿ ಕೆಲಸ ಮಾಡುತ್ತಿದ್ದರು. ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದ ಅವರು, ಇದೇ ಡಿಸೆಂಬರ್‌ನಲ್ಲಿ ಮದುವೆ ಆಗುವುದಕ್ಕೂ ನಿರ್ಧರಿಸಿದ್ದರು.

ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ ಎಂದು ‘ಸ್ಪಾ’ ಮಾಲೀಕರು ಇತ್ತೀಚೆಗೆ ಇಬ್ಬರನ್ನೂ ಕೆಲಸದಿಂದ ತೆಗೆದು ಹಾಕಿದ್ದರು. ಆ ನಂತರ ಪ್ರೇಯಸಿಯಿಂದ ಅಂತರ ಕಾಯ್ದುಕೊಂಡಿದ್ದ ನರೇಶ್, ‘ಕೊನೆಯದಾಗಿ ಮಾತನಾಡಬೇಕು ಬಾ..’ ಎಂದು ಶನಿವಾರ ಸಂಜೆ ಅವರನ್ನು ಕಬ್ಬನ್‌ಪಾರ್ಕ್‌ಗೆ ಕರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಈ ವೇಳೆ ಸಂತೋಷಿ ಮದುವೆ ವಿಚಾರ ಪ್ರಸ್ತಾಪಿಸಿದ್ದಾರೆ. ಅದಕ್ಕೆ ನರೇಶ್, ‘ನಿನ್ನನ್ನು ಮದುವೆ ಆಗುವುದಿಲ್ಲ. ಮನೆಯಲ್ಲಿ ಬೇರೆ ಸಂಬಂಧ ನೋಡುತ್ತಿದ್ದಾರೆ’ ಎಂದಿದ್ದಾನೆ. ಈ ವಿಚಾರವಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಆರೋಪಿ, ‘ಇನ್ನೆಂದು ಮುಖ ತೋರಿಸಬೇಡ’ ಎಂದು ಬೈದು ಅಲ್ಲಿಂದ ಹೊರಟು ಹೋಗಿದ್ದಾನೆ.

ಬಳಿಕ ಮನೆಗೆ ತೆರಳಿದ ಸಂತೋಷಿ, ನಡೆದದ್ದನ್ನು ತಂದೆ ಬಳಿ ಹೇಳಿಕೊಂಡು ಅತ್ತಿದ್ದಾರೆ. ಅಲ್ಲದೆ, ‘ನನ್ನನ್ನು ಬಿಟ್ಟು ಹೋಗದಂತೆ ನರೇಶ್‌ಗೆ ನೀವಾದರೂ ಬುದ್ಧಿ ಹೇಳಿ’ ಎಂದೂ ಮನವಿ ಮಾಡಿದ್ದಾಳೆ. ಅದಕ್ಕೆ ತಂದೆಯೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಯೊಂದರ ಸೆಕ್ಯುರಿಟಿ ಗಾರ್ಡ್ ಆಗಿರುವ ಕಬಿರಾಜ್, ಶನಿವಾರ ರಾತ್ರಿಪಾಳಿ ಇದ್ದುದರಿಂದ 10 ಗಂಟೆ ಸುಮಾರಿಗೆ ಕೆಲಸಕ್ಕೆ ತೆರಳಿದ್ದಾರೆ. ಆ ನಂತರ ಕಬ್ಬನ್‌ಪಾರ್ಕ್‌ಗೆ ಬಂದಿರುವ ಸಂತೋಷಿ, ಸಿದ್ದಯ್ಯ ವೃತ್ತದ ಕಡೆ ಇರುವ ಮರವೊಂದಕ್ಕೆ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ 6 ಗಂಟೆ ವಾಯುವಿಹಾರ ಮಾಡುವವರು ಶವ ನೋಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !