ಬೆಂಗಳೂರು: ಸಹೋದ್ಯೋಗಿಯಾಗಿದ್ದ ಹಿಂದೂ ಧರ್ಮದ ಪುರುಷನ ಜೊತೆ ಬೈಕ್‌ನಲ್ಲಿ ಹೊರಟಿದ್ದ ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದ ಆರೋಪದಡಿ ಬಂಧಿಸಿರುವ ಜಾಕೀರ್, ಎಂಬಿಬಿಎಸ್ ವಿದ್ಯಾರ್ಥಿ ಎಂಬುದು ತನಿಖೆಯಿಂದ ಗೊತ್ತಾಗಿದೆ.
‘ಇತ್ತೀಚೆಗೆ ನಡೆದಿದ್ದ ಘಟನೆ ಸಂಬಂಧ 21 ವರ್ಷ ವಯಸ್ಸಿನ ಯುವತಿ ನೀಡಿದ್ದ ದೂರು ಆಧರಿಸಿ ಜಾಕೀರ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೋಲಾರ ಜಿಲ್ಲೆಯ ಯುವತಿ, ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಕಂಪನಿಯಲ್ಲಿ ಹಿಂದೂ ಧರ್ಮದ ಪುರುಷ ಸಹ ಕೆಲಸದಲ್ಲಿದ್ದಾರೆ. ಸಹೋದ್ಯೋಗಿಗಳಾಗಿದ್ದರಿಂದ ಅವರಿಬ್ಬರು, ಪರಸ್ಪರ ಪರಿಚಿತರು. ಕೆಲಸ ಮುಗಿಯುತ್ತಿದ್ದಂತೆ ಯುವತಿಯನ್ನು ಸಹೋದ್ಯೋಗಿಯೇ ಮನೆಯವರೆಗೂ ಬಿಟ್ಟು ಬರುತ್ತಿದ್ದರು’ ಎಂದರು.
‘ಕೆಲ ದಿನಗಳ ಹಿಂದೆಯಷ್ಟೇ ಯುವತಿ, ಸಹೋದ್ಯೋಗಿ ಜೊತೆ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದರು. ಇದೇ ಸಂದರ್ಭದಲ್ಲಿ ಬುರ್ಖಾ ಧರಿಸಿದ್ದರು. ಸಹೋದ್ಯೋಗಿ ಪುರುಷ ಕೈಗೆ ಕೇಸರಿ ದಾರ ಕಟ್ಟಿಕೊಂಡಿದ್ದರು’ ಎಂದು ಹೇಳಿದರು.
‘ಪುರುಷನ ಜೊತೆ ಯುವತಿ ಹೊರಟಿದ್ದನ್ನು ಆರೋಪಿ ಜಾಕೀರ್ ಗಮನಿಸಿದ್ದ. ಸಹೋದ್ಯೋಗಿ ಕೈಯಲ್ಲಿದ್ದ ಕೇಸರಿ ದಾರ ನೋಡಿದ್ದ. ಯುವತಿ ಬುರ್ಖಾ ಧರಿಸಿದ್ದರಿಂದ ಮತ್ತಷ್ಟು ಅನುಮಾನಗೊಂಡಿದ್ದ. ನಡುರಸ್ತೆಯಲ್ಲಿ ಬೈಕ್ ಅಡ್ಡಗಟ್ಟಿ, ಯುವತಿಯನ್ನು ಬೈಯಲಾರಂಭಿಸಿದ್ದ’ ಎಂದು ತಿಳಿಸಿದರು.
‘ಬೈಕ್‌ನಿಂದ ಇಳಿದಿದ್ದ ಯುವತಿ, ‘ಈತ ನನ್ನ ಸಹೋದ್ಯೋಗಿ. ಮನೆಗೆ ಹೊರಟಿದ್ದೇನೆ’ ಎಂದು ಹೇಳಿದ್ದರು. ಅಷ್ಟಕ್ಕೆ ಸುಮ್ಮನಾಗದ ಆರೋಪಿ, ‘ಹಿಂದೂ ಧರ್ಮದ ಪುರುಷನ ಜೊತೆ ಸುತ್ತಾಡಬಾರದು’ ಎಂದು ಹೇಳಿ ರಂಪಾಟ ಮಾಡಿದ್ದ. ಯುವತಿಯನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಬೈದಾಡಿ, ಅದರ ವಿಡಿಯೊ ಚಿತ್ರೀಕರಿಸಿಕೊಂಡಿದ್ದ. ಅದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ. ಅದನ್ನು ನೋಡಿದ್ದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಹೇಳಿದರು.
ಎರಡು ಬಾರಿ ಪಿಯುಸಿ ಅನ್ನುತ್ತೀರ್ಣ: ‘ಬಂಧಿತ ಜಾಕೀರ್, ದ್ವಿತೀಯ ಪಿಯುಸಿ ಎರಡು ಬಾರಿ ಅನ್ನುತ್ತೀರ್ಣನಾಗಿದ್ದ. ಮೂರನೇ ಬಾರಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದ. ಇದಾದ ನಂತರ, ವಿದೇಶದ ಕಾಲೇಜೊಂದರಲ್ಲಿ ಎಂಬಿಬಿಎಸ್ ವ್ಯಾಸಂಗಕ್ಕೆ ಹೋಗಿದ್ದ. ಆದರೆ, ಕಲಿಕೆ ಅರ್ಧಕ್ಕೆ ಬಿಟ್ಟು ಪುನಃ ನಗರಕ್ಕೆ ವಾಪಸು ಬಂದಿದ್ದ’ ಎಂದು ತಿಳಿಸಿದರು.
‘ನಗರದಲ್ಲಿರುವ ಸಹೋದರಿ ಮನೆಯಲ್ಲಿ ಜಾಕೀರ್ ಉಳಿದುಕೊಂಡಿದ್ದ. ಮತೀಯ ಗೂಂಡಾಗಿರಿ ಮಾಡಿರುವ ಈತನ ಹಿನ್ನೆಲೆ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಗುಳೇದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.