ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಬೆಡ್‌ ವೆಟ್ಟಿಂಗ್‌ ಡೇ: ನಿದ್ರೆ ವೇಳೆ ಮೂತ್ರ–ಇಲ್ಲಿದೆ ಪರಿಹಾರ ಸೂತ್ರ

ಸಕಾಲಕ್ಕೆ ಸಿಗಬೇಕು ಚಿಕಿತ್ಸೆ
Last Updated 25 ಮೇ 2021, 4:06 IST
ಅಕ್ಷರ ಗಾತ್ರ

ಬೆಂಗಳೂರು: ಆ ಬಾಲಕಿಯ ವಯಸ್ಸು 15 ವರ್ಷ. ನಿದ್ರೆಯಲ್ಲಿರುವಾಗ ಮೂತ್ರ ವಿಸರ್ಜಿಸುವ ಅಭ್ಯಾಸ ಇನ್ನೂ ನಿಂತಿಲ್ಲ. ಈ ಸಮಸ್ಯೆಯ ಕಾರಣ ಸಂಬಂಧಿಕರ ಮನೆಯಲ್ಲಿ ರಾತ್ರಿ ಉಳಿದುಕೊಳ್ಳುವುದಕ್ಕೂ ಮುಜುಗರ. ರಾತ್ರಿ ಪ್ರಯಾಣಕ್ಕೂ ನಿರ್ಬಂಧ. ಎದೆ ಎತ್ತರಕ್ಕೆ ಬೆಳೆದ ಮಗಳು ಇನ್ನೂ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಾಳೆ ಎಂದು ಹೇಳಬೇಕಾದ ಸಂದರ್ಭ ಎದುರಾದಾಗ ಪೋಷಕರಿಗೂ ಕಸಿವಿಸಿ. ಇದು ಮುಗಿಯದ ಸಮಸ್ಯೆ ಎಂಬ ಚಿಂತೆಯಲ್ಲಿದ್ದಾರೆ ಆ ಬಾಲಕಿ ಮತ್ತು ಪೋಷಕರು.

***

ಅವನು ಐದನೇ ತರಗತಿ ಬಾಲಕ. ನಿದ್ರೆ ಸಮಯದಲ್ಲಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಅವನ ನಿತ್ಯ ಸಮಸ್ಯೆ. ದೆವ್ವ ಕಂಡು ಹೆದರಿರಬೇಕು ಎಂದು ಅವನ ಪೋಷಕರು ಮಾಟ–ಮಂತ್ರ ಮಾಡಿಸಿದ್ದಕ್ಕೆ ಲೆಕ್ಕ ಇಲ್ಲ. ಈಗ ಕೇವಲ ₹300 ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ’ಹಾಸಿಗೆಯಲ್ಲಿ ಉಚ್ಚೆ ಮಾಡಿಕೊಳ್ಳುತ್ತಾನೆ‘ ಎಂಬ ಗೆಳೆಯರ ಮೂದಲಿಕೆಯಿಂದ ಪಾರಾಗಿದ್ದಾನೆ ಬಾಲಕ.

***

ಈ ಸಮಸ್ಯೆಯಿಂದ ನೂರಾರು ಮಕ್ಕಳು ಬಳಲುತ್ತಿದ್ದಾರೆ. ಆದರೆ, ಸಕಾಲಕ್ಕೆ ಚಿಕಿತ್ಸೆ ದೊರೆತರೆ ಇದು ದೊಡ್ಡ ಸಮಸ್ಯೆಯೇ ಅಲ್ಲ ಎನ್ನುತ್ತಾರೆ ನಗರದ ರೈನ್‌ಬೊ ಆಸ್ಪತ್ರೆಯ ಮಕ್ಕಳ ನರವಿಜ್ಞಾನ (ಪೀಡಿಯಾಟ್ರಿಕ್‌ ನೆಫ್ರಾಲಜಿಸ್ಟ್‌) ತಜ್ಞ ಡಾ. ಸೌಮಿಲ್ ಗೌರ್.

’ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದನ್ನು ಮಾನಸಿಕ ಕಾಯಿಲೆ ಎಂಬಂತೆ ನೋಡಲಾಗುತ್ತಿದೆ. ಎಷ್ಟೋ ಜನರು ಮನೋವೈದ್ಯರ ಬಳಿ ಮಕ್ಕಳನ್ನು ಕರೆದೊಯ್ಯುತ್ತಾರೆ. ಇದು ತಪ್ಪು. ಇದು ದೇಹಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ಇದನ್ನು ಸುಲಭವಾಗಿ ವಾಸಿ ಮಾಡಬಹುದು‘ ಎಂದು ಅವರು ಹೇಳುತ್ತಾರೆ.

ಮೂತ್ರಕೋಶ ಚಿಕ್ಕದಾಗಿದ್ದರೆ ಅಥವಾ ಮೂತ್ರಕೋಶ ಸಾಮಾನ್ಯಕ್ಕಿಂತ ಅತಿಹೆಚ್ಚು ಕ್ರಿಯಾಶೀಲವಾಗಿದ್ದರೆ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಮತ್ತು ಈ ಮೊದಲು ಮನೆಯಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ (ಆನುವಂಶಿಕವಾಗಿ) ಅಂತಹ ಮಕ್ಕಳಲ್ಲಿ ಈ ತೊಂದರೆ ಕಾಣಿಸುತ್ತದೆ.

‘ಸದ್ಯ 250ಕ್ಕೂ ಹೆಚ್ಚು ಮಕ್ಕಳು ನನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದಾರೆ. ತಿಂಗಳ ಔಷಧಿಗೆ ₹200ರಿಂದ ₹300 ಖರ್ಚು ಮಾಡಿದರೆ ಸಾಕು, ಈ ಸಮಸ್ಯೆ ಗುಣಪಡಿಸಬಹುದು. ಮಗುವಿನ ಐದನೇ ವರ್ಷದ ಜನ್ಮದಿನದ ನಂತರ ಈ ಸಮಸ್ಯೆ ಕಾಣಿಸಬಾರದು. ಐದು ವರ್ಷಗಳ ನಂತರವೂ ಈ ತೊಂದರೆ ಮುಂದುವರಿದಿದ್ದರೆ ತಕ್ಷಣವೇ ಮಕ್ಕಳ ನರವಿಜ್ಞಾನ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು’ ಎಂದರು.

‘ಬೇರೆ ಜಿಲ್ಲೆಗಳಿಂದಲ ಹಾಗೂ ಬೇರೆ ರಾಜ್ಯಗಳಿಂದಲೂ ಮಕ್ಕಳು ಈ ಸಮಸ್ಯೆಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಪ್ರತಿ ನೂರು ಮಕ್ಕಳ ಪೈಕಿ ಒಬ್ಬರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT