ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧೆಡೆ ಕ್ಯಾನ್ಸರ್ ಜಾಗೃತಿ

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ರೋಗ, ಚಿಕಿತ್ಸೆ ಬಗ್ಗೆ ವೈದ್ಯರಿಂದ ಅರಿವು
Last Updated 4 ಫೆಬ್ರುವರಿ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ, ಧೂಮಪಾನದಂತಹ ವ್ಯಸನ, ವಾಯುಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಕಾಯಿಲೆಯನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಗುಣಪಡಿಸಲು ಸಾಧ್ಯ’ ಎಂದು ಇಲ್ಲಿನ ವೈದ್ಯರು ಜಾಗೃತಿ ಮೂಡಿಸಿದರು.

ಆರೋಗ್ಯ ಇಲಾಖೆ, ವಿವಿಧ ಆಸ್ಪತ್ರೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದವು. ವಾಕಥಾನ್, ಬೈಕ್ ರ್‍ಯಾಲಿ, ಉಪನ್ಯಾಸ, ವಿಚಾರಸಂಕಿರಣ, ಗುಣಮುಖರಿಗೆ ಸನ್ಮಾನ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಆರೋಗ್ಯ ಇಲಾಖೆ ವಿಕಾಸಸೌಧದ ಗಾಂಧಿ ಪ್ರತಿಮೆಯಿಂದ, ಕಂಠೀರವ ಕ್ರೀಡಾಂಗಣದವರೆಗೆ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ವಾಕಥಾನ್‌ನಲ್ಲಿ ಭಾಗವಹಿಸಿ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು.

ನಿಯಮಿತವಾಗಿ ಆರೋಗ್ಯ ತಪಾಸಣೆ, ಆರೋಗ್ಯಕರ ಆಹಾರ ಸೇವನೆ, ತಂಬಾಕು ಸೇವನೆಗೆ ಕಡಿವಾಣ ಸೇರಿ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಆರೋಗ್ಯ ಕಾರ್ಯಕರ್ತರು ಮನವಿ ಮಾಡಿಕೊಂಡರು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯೂ ವಾಕಥಾನ್ ನಡೆಸಿತು. ಲಾಲ್‌ಬಾಗ್‌ನಲ್ಲಿ ನಡಿಗೆದಾರರಿಗೆ ಜಾಗೃತಿ ಮೂಡಿಸಿದ ಕಿದ್ವಾಯಿ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳು, ಸಂಸ್ಥೆಯವರೆಗೂ ಜಾಗೃತಿ ಮೂಡಿಸುತ್ತಾ ಹೆಜ್ಜೆ ಹಾಕಿದರು.

ಫುಟ್ಬಾಲ್ ಆಟ: ಎಚ್‌ಸಿಜಿ ಆಸ್ಪತ್ರೆ ವತಿಯಿಂದ ಆಯೋಜಿಸಿದ ವಾಕಥಾನ್‌ಗೆ ಚಲನಚಿತ್ರ ನಟಿ ಮಾಲಾಶ್ರೀ ಹಾಗೂ ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಚಾಲನೆ ನೀಡಿದರು. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಫುಟ್ಬಾಲ್ ಆಟ ನಡೆಸಲಾಯಿತು. ಅಂಧರು ಮತ್ತು ಕಣ್ಣಿಗೆ ಪಟ್ಟಿಕೊಂಡವರನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಿ, ಫುಟ್‌ಬಾಲ್ ಆಡಿಸಲಾಯಿತು.

ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಬಳಲುತ್ತಿರುವವರಲ್ಲಿ ವಿಶ್ವಾಸ ಮೂಡಿಸಲು ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಯು 5 ಕಿ.ಮೀ. ವಾಕಥಾನ್ ನಡೆಸಿತು. ‘ಅಧ್ಯಯನದ ಪ್ರಕಾರ 2022ರಲ್ಲಿ 14 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಕ್ಯಾನ್ಸರ್ ಕುರಿತ ಆತಂಕ ಮತ್ತು ಮೌಢ್ಯವನ್ನು ತೊಡೆದು ಹಾಕಬೇಕು’ ಎಂದು ವೈದ್ಯರು ಹೇಳಿದರು.

ಮಣಿಪಾಲ್, ಆಸ್ಟರ್, ನಾರಾಯಣ ಹೆಲ್ತ್, ಅಪೋಲೊ, ಬಿಜಿಎಸ್ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಕ್ಯಾನ್ಸರ್ ದಿನವನ್ನು ಆಚರಿಸಿ, ರೋಗದ ಬಗ್ಗೆ ಅರಿವು ಮೂಡಿಸಲಾಯಿತು.

‘ಕ್ಯಾನ್ಸರ್‌ ಸಾಮಾನ್ಯ ಕಾಯಿಲೆ’

ಕ್ಯಾನ್ಸರ್‌ ಕಾಯಿಲೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಉದ್ದೇಶದಿಂದ ಫೋರ್ಟಿಸ್‌ ಆಸ್ಪತ್ರೆ ‘ಪ್ರಿವೆಂಟಿವ್‌ ಆಂಕೊಲಾಜಿ ವಿಭಾಗ’ವನ್ನು ಪ್ರಾರಂಭಿಸಿದೆ. ಈ ವಿಭಾಗವನ್ನು ನಟಿ ಪೂಜಾ ಗಾಂಧಿ ಉದ್ಘಾಟಿಸಿದರು. ‘ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಕ್ಯಾನ್ಸರ್‌ ಬಗ್ಗೆ ಜನರಿಗೆ ಜಾಗೃತಿ ಇಲ್ಲದ ಕಾರಣ ಕೊನೆ ಹಂತಕ್ಕೆ ತಲುಪುವವರೆಗೂ ಈ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ. ಆರಂಭದಲ್ಲಿಯೇ ಕ್ಯಾನ್ಸರ್‌ ಪತ್ತೆ ಹಚ್ಚುವುದರಿಂದ ಸೂಕ್ತ ಚಿಕಿತ್ಸೆ ಪಡೆದು, ಗುಣಮುಖರಾಗಬಹುದು’ ಎಂದು ಪೂಜಾಗಾಂಧಿ ಹೇಳಿದರು.

ಫೋರ್ಟಿಸ್‌ ಆಸ್ಪತ್ರೆಯ ವೈದ್ಯೆ ಡಾ.ನಿತಿ ರೈಝಾದ, ‘ಕ್ಯಾನ್ಸರ್ ತಡೆಗಟ್ಟುವುದು ಅತ್ಯಂತ ಅವಶ್ಯಕ. ಹೀಗಾಗಿ, ಆಸ್ಪತ್ರೆಯಲ್ಲಿ ನೂತನ ವಿಭಾಗವನ್ನು ತೆರೆಯಲಾಗಿದೆ. ಈ ವಿಭಾಗದಲ್ಲಿ ಎಲ್ಲಾ ಬಗೆಯ ಕ್ಯಾನ್ಸರ್‌ನನ್ನು ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT