ಮಂಗಳವಾರ, ಆಗಸ್ಟ್ 20, 2019
22 °C
ಬೆಂಗಳೂರಿಗೆ ‘ಜಾಗತಿಕ ವಿನ್ಯಾಸ ರಾಜಧಾನಿ’ ಶ್ರೇಯ: ಪರಿಶೀಲನೆ ಮುಕ್ತಾಯ

ಮೂಲಸೌಕರ್ಯ ಅಭಿವೃದ್ಧಿ ಇನ್ನು ವಿನ್ಯಾಸ ಕೇಂದ್ರಿತ

Published:
Updated:
Prajavani

ಬೆಂಗಳೂರು: 2022ನೇ ಸಾಲಿನ ‘ಜಾಗತಿಕ ವಿನ್ಯಾಸ ರಾಜಧಾನಿ’ (ಡಬ್ಲ್ಯುಡಿಸಿ) ಶ್ರೇಯ ಪಡೆಯಲು ಪಟ್ಟಿ ಮಾಡಿರುವ ಎರಡು ಮಹಾನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಈ ಶ್ರೇಯ ಪಡೆಯಲು ನಗರಕ್ಕೆ ಇರುವ ಅರ್ಹತೆ ಬಗ್ಗೆ ಜಾಗತಿಕ ವಿನ್ಯಾಸ ಸಂಘಟನೆ (ಡಬ್ಲ್ಯುಡಿಒ) ಪರಿಶೀಲನೆ ಪೂರ್ಣಗೊಳಿಸಿದೆ. 

ಡಬ್ಲ್ಯುಡಿಒ ಸಂಸ್ಥೆಯ ಪ್ರತಿನಿಧಿಗಳಾದ ಡಾ.ಬ್ರ್ಯಾಂಡನ್‌ ಜಿಯೇನ್‌, ಬರ್ಡಾಂಡ್‌ ಡೆರೋಮ್‌, ಆ್ಯಂಡ್ರಿಯಾ ಸ್ಪ್ರಿಂಜರ್‌ ಅವರು ಮಂಗಳವಾರ ಮತ್ತು ಬುಧವಾರ ನಗರದಲ್ಲಿ ಪರಿಶೀಲನೆ ನಡೆಸಿದರು. 

‘ಡಬ್ಲ್ಯುಡಿಒ ತಂಡವು ಇಲ್ಲಿನ ಪರಂಪರೆ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ  ಅಳವಡಿಸಿಕೊಂಡಿರುವ ವಿನ್ಯಾಸ ಹಾಗೂ ವಿನೂತನ ಆವಿಷ್ಕಾರಗಳ ಬಗ್ಗೆ ಮಾಹಿತಿ ಪಡೆದಿದೆ. ಚರ್ಚ್‌ಸ್ಟ್ರೀಟ್‌ ರಸ್ತೆ ಮತ್ತು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ನಿರ್ಮಿಸಿರುವ ರಸ್ತೆಗಳು, ಇಂದಿರಾ ಕ್ಯಾಂಟೀನ್‌ ವಿನ್ಯಾಸಗಳ ವೈಶಿಷ್ಟ್ಯಗಳ ಅವರಿಗೆ ವಿವರಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಡಬ್ಲ್ಯುಡಿಸಿ–ಏನಿದರ ಪ್ರಯೋಜನ?

‘ಜಾಗತಿಕ ವಿನ್ಯಾಸ ರಾಜಧಾನಿ ಪಟ್ಟಕ್ಕೆ ಪಡೆಯುವುದಕ್ಕೆ ಬಿಡ್‌ ಸಲ್ಲಿಸಿದ ಬಳಿಕ ಬಿಬಿಎಂಪಿ ಹಾಗೂ ಡಬ್ಲ್ಯುಡಿಒ ಒಪ್ಪಂದ ನಡೆದಿದೆ. ಅದರ ಪ್ರಕಾರ ಮೂಲಸೌಕರ್ಯ ಅಭಿವೃದ್ಧಿಯೂ ಸೇರಿದಂತೆ ಎಲ್ಲ ನಿರ್ಮಾಣ ಸಂಬಂಧಿ ವಿಚಾರಗಳಿಗೆ ವಿನ್ಯಾಸ ನೀತಿ ಹೊಂದುವುದು ಕಡ್ಡಾಯ. ಇನ್ನು ಮುಂದೆ ನಗರದ ಎಲ್ಲ ನಿರ್ಮಾಣ ಚಟುವಟಿಕೆಗಳೂ ವಿನ್ಯಾಸ ಕೇಂದ್ರಿತವಾಗಿರುವಂತೆ ನೋಡಿಕೊಳ್ಳಬೇಕಿದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಇದು ನೆರವಾಗಲಿದೆ’ ಎಂದರು. 

‘ಈ ಶ್ರೇಯಕ್ಕೆ ಪಾತ್ರವಾದರೆ, ಡಬ್ಲ್ಯುಡಿಒ ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸಲಿದೆ. ವ್ಯವಸ್ಥಿತ ವಿನ್ಯಾಸ ನೀತಿ ಹೊಂದಲು ನೆರವು ನೀಡಲಿದೆ. ನಗರದಲ್ಲಿ 2022ರಲ್ಲಿ ವಿವಿಧ ವಿನ್ಯಾಸ ಕೇಂದ್ರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿವಿಧ ದೇಶಗಳ ಖ್ಯಾತ ತಜ್ಞರು, ಪ್ರಸಿದ್ಧ ಸಂಸ್ಥೆಗಳು ಭಾಗವಹಿಸಲಿದ್ದಾರೆ’ ಎಂದು ಆಯುಕ್ತರು ತಿಳಿಸಿದರು.

‘ನಮ್ಮಲ್ಲಿ ಕಟ್ಟಡ, ಬೀದಿ ದೀಪ, ರಸ್ತೆ ಸೌಕರ್ಯ, ಉದ್ಯಾನ, ಕೆರೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಾಗ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ರಸ್ತೆಗಳು ಗ್ರೇಡ್‌ ಸಪರೇಟರ್‌ ಅಸಹ್ಯವಾಗಿ ಕಾಣಿಸುತ್ತವೆ ಎಂದು ಜನ ದೂರುತ್ತಾರೆ. ವಿನ್ಯಾಸದ ಮಹತ್ವದ ಬಗ್ಗೆ ಅಧಿಕಾರಿಗಳಲ್ಲೂ ಸ್ಪಷ್ಟ ಪರಿಕಲ್ಪನೆ ಇಲ್ಲ. ಅವರೂ ‌ಹೆಚ್ಚಿನ ಜ್ಞಾನ ಪಡೆಯುವುದಕ್ಕೆ ಇದು ಸಹಕಾರಿ’ ಎಂದರು. 

ಡಬ್ಲ್ಯುಡಿಒ ಪ್ರತಿನಿಧಿಗಳ ತಂಡದ ಸದಸ್ಯರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಹಣಕಾಸು ಇಲಾಖೆ ಮತ್ತು  ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ಜಲಮಂಡಳಿಯ ಅಧಿಕಾರಿಗಳ ಜೊತೆಯೂ ಸಮಾಲೋಚನೆ ನಡೆಸಿದ್ದಾರೆ.

ಅಕ್ಟೋಬರ್‌ನಲ್ಲಿ ಘೋಷಣೆ

ಕೆನಡಾದ ಮಾಂಟ್ರಿಯಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಡಬ್ಲ್ಯುಡಿಒ ಪ್ರತಿ ಎರಡು ವರ್ಷಕ್ಕೊಮ್ಮೆ ಜಗತ್ತಿನ ಒಂದು ಮಹಾನಗರಕ್ಕೆ ‘ಜಾಗತಿಕ ವಿನ್ಯಾಸ ರಾಜಧಾನಿ’ ಶ್ರೇಯವನ್ನು ನೀಡುತ್ತದೆ. 2022ನೇ ಸಾಲಿನ ಶ್ರೇಯಕ್ಕೆ  ಬೆಂಗಳೂರು ಹಾಗೂ ಸ್ಪೇನ್‌ನ ವಲೆನ್ಸಿಯಾ ನಗರದ ನಡುವೆ ಪೈಪೋಟಿ ಇದೆ. ಯಾವ ನಗರಕ್ಕೆ ಈ ಶ್ರೇಯ ಸಿಗಲಿದೆ ಎಂಬುದನ್ನು 2019ರ ಅಕ್ಟೋಬರ್‌ 11ರಂದು ಹೈದರಾಬಾದ್‌ನಲ್ಲಿ ಡಬ್ಲ್ಯುಡಿಒ 31ನೇ ‘ಜಾಗತಿಕ ವಿನ್ಯಾಸ ಸಮಾವೇಶ’ದಲ್ಲಿ ಪ್ರಕಟಿಸಲಾಗುತ್ತದೆ.

ಎಂಟು ಮಹತ್ವದ ಕಾರ್ಯಕ್ರಮಗಳಿಗೆ ಆತಿಥ್ಯ

ಜಾಗತಿಕ ವಿನ್ಯಾಸ ರಾಜಧಾನಿ ಶ್ರೇಯಕ್ಕೆ ಬೆಂಗಳೂರು ಪಾತ್ರವಾದರೆ ಬಿಬಿಎಂಪಿ– ಡಬ್ಲ್ಯುಡಿಒ ಜಂಟಿ ಸಹಭಾಗಿತ್ವದಲ್ಲಿ ಎಂಟು ಮಹತ್ವದ ಕಾರ್ಯಕ್ರಮಗಳನ್ನು ನಗರದಲ್ಲಿ ಏರ್ಪಡಿಸಲಾಗುತ್ತದೆ.

‘ಮಾನ್ಯತಾ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ, ನಾಗರಿಕರ ಸಹಭಾಗಿತ್ವದ ‘ವಿಶ್ವ ವಿನ್ಯಾಸ ಬೀದಿ ಉತ್ಸವ’, ನಗರದ ವಿನ್ಯಾಸದ ಮಹತ್ವ ಸಾರುವ ‘ಸ್ಪಾಟ್‌ಲೈಟ್‌’ ಕಾರ್ಯಕ್ರಮ, ವಿಶ್ವದ ವಿವಿಧ ದೇಶಗಳಲ್ಲಿನ ಪ್ರಮುಖ ವಿನ್ಯಾಸಗಳನ್ನು ಪ್ರದರ್ಶಿಸುವ ಹಾಗೂ ಈ ಕುರಿತ ಅನುಭವ ಹಂಚಿಕೆ ಕಾರ್ಯಕ್ರಮ, ವಿಶ್ವ ವಿನ್ಯಾಸ ನೀತಿಗೆ ಸಂಬಂಧಿಸಿದ ಸಂವಾದ, ಜಗತ್ತಿನ ಪ್ರಸಿದ್ಧ ವಿನ್ಯಾಸಗಾರರು ಮತ್ತು ಸಂಸ್ಥೆಗಳು ತಮ್ಮ ಶ್ರೇಷ್ಠ ವಿನ್ಯಾಸಗಳನ್ನು ಬಿಂಬಿಸುವ ‘ವಿನ್ಯಾಸ ಸಪ್ತಾಹ’, ಈ ಹಿಂದೆ ಈ ಶ್ರೇಯಕ್ಕೆ ಪಾತ್ರವಾಗಿರುವ ನಗರಗಳ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು ಅನುಭವ ಹಂಚಿಕೊಳ್ಳುವ ಕಾರ್ಯಕ್ರಮ, ‘ವಿಶ್ವ ವಿನ್ಯಾಸ ರಾಜಧಾನಿ’ ಶ್ರೇಯವನ್ನು ಅಧಿಕೃತವಾಗಿ ಹಸ್ತಾಂತರಿಸುವ ‘ಘಟಿಕೋತ್ಸವ’ಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. 

Post Comments (+)