ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಬೈಕರ್‌ಗಳ ದರ್ಬಾರ್: ‘ವಿಶ್ವ ಮೋಟರ್‌ ಸೈಕಲ್‌ ದಿನ –2022’

‘ವಿಶ್ವ ಮೋಟರ್‌ ಸೈಕಲ್‌ ದಿನ –2022’ ಕಾರ್ಯಕ್ರಮ
Last Updated 26 ಜೂನ್ 2022, 21:41 IST
ಅಕ್ಷರ ಗಾತ್ರ

ಬೆಂಗಳೂರು: ರೊಂಯ್‌.. ರೊಂಯ್‌.. ಎಂದು ಜೋರಾಗಿ ಶಬ್ದ ಹೊರಡಿಸುವ ಬೈಕ್‌ಗಳು ಅಲ್ಲಿದ್ದವು. ₹ 5 ಲಕ್ಷದಿಂದ ₹ 8 ಲಕ್ಷ ಬೆಲೆ ಬಾಳುವ ಸ್ಪೋರ್ಟ್ಸ್‌ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಬೈಕಿಂಗ್‌ ಸೂಟು ಧರಿಸಿದ್ದ ನೂರಾರು ಹವ್ಯಾಸಿ ಬೈಕರ್‌ಗಳು ನೆರೆದಿದ್ದರು.

‘ಡೆಕ್ಕನ್‌ ಹೆರಾಲ್ಡ್‘ ಮತ್ತು ಎಬಿಸಿ ಇಂಡಿಯಾ (ಅಸೋಸಿಯೇಷನ್‌ ಆಫ್‌ ಬೈಕಿಂಗ್‌ ಕಮ್ಯುನಿಟಿ)ಸಹಯೋಗದಲ್ಲಿ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಭಾನುವಾರ ನಡೆದ ‘ವಿಶ್ವ ಮೋಟರ್‌ ಸೈಕಲ್‌ ದಿನ –2022’ ಕಾರ್ಯಕ್ರಮ
ದಲ್ಲಿ ಕಂಡುಬಂದ ದೃಶ್ಯಗಳಿವು.

ಉದ್ಯಾನನಗರಿಯ ಬೈಕರ್‌ಗಳ ಸಮಾಗಮಕ್ಕೆ ಈ ಕಾರ್ಯಕ್ರಮ ವೇದಿಕೆಯೊದಗಿಸಿತು. ಎಬಿಸಿ ಇಂಡಿಯಾ 80ಕ್ಕೂ ಹೆಚ್ಚು ಬೈಕಿಂಗ್‌ ಕ್ಲಬ್‌ಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಬೆಂಗಳೂರು ಅಲ್ಲದೆ ತುಮಕೂರು, ಮೈಸೂರು, ಹುಬ್ಬಳ್ಳಿ ಮತ್ತು ನೆರೆಯ ರಾಜ್ಯ ಕೇರಳದಿಂದ ಬಂದ ಸಾವಿರಕ್ಕೂ ಅಧಿಕ ಸದಸ್ಯರು ಪಾಲ್ಗೊಂಡರು. ಮಹಿಳಾ ಬೈಕರ್‌ಗಳೂ ಬಹಳಷ್ಟು ಸಂಖ್ಯೆಯಲ್ಲಿದ್ದರು.

ತಮ್ಮಲ್ಲಿರುವ ಹೊಸ ವಿನ್ಯಾಸದ, ಅಧಿಕ ಸಾಮರ್ಥ್ಯದ ಬೈಕ್‌ಗಳನ್ನು ಹೆಮ್ಮೆಯಿಂದ ಪ್ರದರ್ಶಿಸಲಿಕ್ಕಾಗಿಯೇ ಹಲವರು ಬಂದಿದ್ದರು. ಬೈಕರ್‌ಗಳಿಗಾಗಿ ವಿವಿಧ ಸ್ಪರ್ಧೆಗಳು ಮತ್ತು ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಹೊಸ ಬೈಕ್‌ಗಳ ಅನಾವರಣ, ಫ್ಯಾಷನ್‌ ಶೋ ಸಮಾರಂಭದ ಕಳೆ ಹೆಚ್ಚಿಸಿತು. ಬೈಕ್‌ಗಳ ಮುಂದೆ ನಿಂತು ಫೋಟೊ, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಪಟ್ಟರು. ಸಂಗೀತಕ್ಕೆ ನೃತ್ಯಮಾಡಿ ಖುಷಿಪಟ್ಟರು.

ಮಳಿಗೆಗಳು: ಬೈಕಿಂಗ್‌ ಮಾಡಲು ಅಗತ್ಯವಿರುವ ಪರಿಕರಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆಗಳನ್ನು ತೆರೆಯಲಾಗಿತ್ತು. ಹೆಲ್ಮೆಟ್‌, ಜಾಕೆಟ್‌, ಮೊಣಕೈ, ಮಂಡಿಯ ಪ್ಯಾಡ್‌ಗಳು, ಕೈಗವಸು, ಬೈಕಿಂಗ್‌ ಬೂಟುಗಳು ಮತ್ತು ಬೈಕಿಂಗ್‌ ಸೂಟುಗಳ ಮಳಿಗೆಗಳ ಮುಂದೆ ಜನಸಂದಣಿ ಕಂಡುಬಂತು. ಆಹಾರ ಮಳಿಗೆಗಳೂ ಅಲ್ಲಿದ್ದವು.

ಸಂವಾದ: ’ಟ್ರಾಫಿಕ್‌ ಶಿಸ್ತು, ನಿಯಮ ಪಾಲಿಸಿ‘ ವಿಷಯದ ಸಂವಾದ ನಡೆಯಿತು. ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ, ಬೈಕರ್‌ ರಜಿನಿ ಕೃಷ್ಣನ್, ರೈಡರ್‌ ಹೇಮಂತ್‌ ಮುದ್ದಪ್ಪ ಪಾಲ್ಗೊಂಡರು.

ಬೈಕ್‌ಗಳ ನಿರ್ವಹಣೆ, ಇಂಧನ ಉಳಿತಾಯ, ನೂರಾರು ಕಿ.ಮೀ. ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಬೈಕ್‌ನಲ್ಲಿ ದೇಶ ಪರ್ಯಟನೆ ಮಾಡಿದ ರೈಡರ್‌ಗಳು ತಮ್ಮ ಅನುಭವ ಹಂಚಿಕೊಂಡರು.

ಜಾಗೃತಿ ಜಾಥಾ

ರಸ್ತೆ ಸಂಚಾರ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವಉದ್ದೇಶದಿಂದ ಬೈಕ್‌ ರ‍್ಯಾಲಿ ನಡೆಯಿತು.

ರಾಜಾಜಿನಗರದ ಗ್ಲೋಬಲ್‌ ಮಾಲ್‌ ಬಳಿ ಬೆಳಿಗ್ಗೆ 6ಕ್ಕೆ ರ‍್ಯಾಲಿಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ರ‍್ಯಾಲಿ ಜಯಮಹಲ್‌ ಪ್ಯಾಲೆಸ್‌ನಲ್ಲಿ ಕೊನೆಗೊಂಡಿತು. ಸುಮಾರು 500 ಬೈಕರ್‌ಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT