ವಿಶ್ವ ಶಾಂತಿಗೆ ಭಾರತದ ಪುರಾತನ ಜ್ಞಾನ ಬಳಕೆಯಾಗಬೇಕು: ದಲೈಲಾಮಾ

7

ವಿಶ್ವ ಶಾಂತಿಗೆ ಭಾರತದ ಪುರಾತನ ಜ್ಞಾನ ಬಳಕೆಯಾಗಬೇಕು: ದಲೈಲಾಮಾ

Published:
Updated:

ಬೆಂಗಳೂರು: ವಿಶ್ವದ ಶಾಂತಿಗಾಗಿ ಭಾರತದ ಪುರಾತನ ಜ್ಞಾನದ ಬಳಕೆ ಆಗಬೇಕು. ಈ ಜ್ಞಾನದ ಪುನರುಜ್ಜೀವನ ಭಾರತದಲ್ಲಿಯೇ ಆಗಿ ವಿಶ್ವದಲ್ಲಿ ಪಸರಿಸಬೇಕು ಎಂದು ಬೌದ್ಧ ಧರ್ಮ ಗುರು ದಲೈಲಾಮಾ ಹೇಳಿದರು.

ಭಾರತದಲ್ಲಿ ಇದು ಸಾಧ್ಯವಾದರೆ ಚೀನಾವೂ ಅದನ್ನು ಅನುಕರಿಸುತ್ತದೆ. ವಿಶ್ವದ ಇತರ ರಾಷ್ಟ್ರಗಳೂ ಅನುಕರಿಸುತ್ತವೆ ಎಂದು ತಿಳಿಸಿದರು.

ಶಾಂತಿ, ಕಾರುಣ್ಯ, ಸಹನಾಶೀಲ ಮತ್ತು ಮಾನಸಿಕ ದೃಢತೆ ಪುರಾತನ ಭಾರತೀಯ ಜ್ಞಾನ ಪರಂಪರೆಯ ಭಾಗ. ಬುದ್ಧ ಅದನ್ನು ಪುನರುಜ್ಜೀವಗೊಳಿಸಿ ಉಪದೇಶ ಮಾಡಿದನು. ಆ ಜ್ಞಾನ ಪರಂಪರೆ ಇಂದು ಅತ್ಯಗತ್ಯ. ಯಾವುದೇ ಮತವನ್ನು ಅವಲಂಬಿಸುವವರು ಭಾರತೀಯ ಜ್ಞಾನ ಪದ್ಧತಿ ಅಳವಡಿಸಿಕೊಳ್ಳಬಹುದು. ಅದು ಮನಸ್ಸು ಮತ್ತು ಶಾಂತಚಿತ್ತತೆ ಅಳವಡಿಸಿಕೊಳ್ಳುವುದರ ಕುರಿತಾಗಿದೆ ಎಂದರು.

ಟಿಬೆಟ್‌ಗೆ ಬೌದ್ಧ ಧರ್ಮ ಕಾಲಿಡುವುದಕ್ಕೆ ಮುನ್ನ ಅಜ್ಞಾನದ ಕಗ್ಗತ್ತಲಿನಿಂದ ಕೂಡಿತು. ಬುದ್ಧನ ಜ್ಞಾನ ಅಲ್ಲಿಗೆ ತಲುಪಿದ ನಂತರ ಜ್ಞಾನದ ಮಾರ್ಗ ತೆರೆದುಕೊಂಡಿತು. ವಿಶ್ವದಲ್ಲಿ ಇಂದು ಕಾಡುತ್ತಿರುವ ಅಶಾಂತಿ, ಹಿಂಸೆ, ಕ್ಷೋಭೆ ನಿವಾರಣೆಗೆ ಭಾರತೀಯ ಪುರಾತನ ಜ್ಞಾನವೇ ತಕ್ಕ ಮದ್ದು ಎಂದರು.

ಪ್ರಾಚೀನ ನಲಂದಾ, ತಕ್ಷಶಿಲಾ ಅದ್ಭುತ ಜ್ಞಾನದ ಕೇಂದ್ರಗಳಾಗಿದ್ದವು. ಮಾನವನ ಚಿತ್ತಶಾಂತಿ, ಮಾನವರೆಲ್ಲರೂ ಒಂದೇ ಎಂಬುದನ್ನು ಅಲ್ಲಿ ಬೋಧಿಸಲಾಗುತ್ತಿತ್ತು ಎಂದು ಅವರು ಹೇಳಿದರು.

ಇಸ್ಲಾಂನಲ್ಲಿ ಶಿಯಾ- ಸುನ್ನಿಗಳ ಸಂಘರ್ಷ ನಿಲ್ಲಿಸಲು ಒಂದು ಸಣ್ಣ ಪ್ರಯತ್ನ ಆರಂಭಿಸಿದ್ದೇನೆ. ಶಿಯಾ ಸುನ್ನಿಗಳು ಲಡಾಖ್ ಸೇರಿದಂತೆ ಭಾರತದ ಎಲ್ಲಾ ಕಡೆಗಳಲ್ಲೂ ಶಾಂತಿ ಮತ್ತು ಸೌಹಾರ್ದ, ಒಗ್ಗಟ್ಟಿನಿಂದ ಇದ್ದಾರೆ. ಆದ್ದರಿಂದ, ದೆಹಲಿಯಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿ, ದೇಶದ ಎರಡೂ ಪಂಗಡಗಳ ವಿದ್ವಾಂಸರನ್ನು ಕರೆಸಿ ಮಾತಕತೆಗೆ ಚಾಲನೆ ನೀಡಲಾಗುವುದು. ಇದಕ್ಕೆ ವಿಶ್ವ ಮಟ್ಟದ ಇಸ್ಲಾಮಿಕ್ ವಿದ್ವಾಂಸರನ್ನು ಕರೆಸಲಾಗುವುದು ಎಂದರು. 

ಧರ್ಮದ ಹೆಸರಲ್ಲಿ ಭೀಕರ ರಕ್ತಪಾತವಾಗುತ್ತಿದೆ. ದೇವರನ್ನು ತಂದೆ ಎಂದು ನಂಬುವವರು ತಮ್ಮ ಸಹೋದರರ ಮೇಲೆ ಹಿಂಸೆ ನಡೆಸುವುದು ಎಷ್ಟು ಸರಿ ಎಂದೂ ದಲೈಲಾಮಾ ಪ್ರಶ್ನಿಸಿದರು.

ಭಾರತದಲ್ಲಿ ಹಿಂದು,ಮುಸ್ಲಿಂ, ಕ್ರೈಸ್ತ ರು ಅನ್ಯೋನ್ಯವಾಗಿಯೇ ಇದ್ದಾರೆ. ರಾಜಕೀಯ ಕಾರಣಗಳಿಗೆ ಹುಳಿ ಹಿಂಡುವ ಕೆಲಸ ನಡೆದಿದೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !