ಬುಧವಾರ, ಜುಲೈ 28, 2021
21 °C
2021–22ನೇ ಸಾಲಿನ ಬಜೆಟ್‌ನಲ್ಲಿ ಉಲ್ಲೇಖಿಸಿದ್ದ ಕೆಲ ಕಾರ್ಯಕ್ರಮಗಳನ್ನು ಕೈಬಿಟ್ಟ ಬಿಬಿಎಂಪಿ

ಯಡಿಯೂರು ವಾರ್ಡ್‌: ₹ 4.75 ಕೋಟಿ ಅನುದಾನಕ್ಕೆ ಕತ್ತರಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯು 2021–22ನೇ ಸಾಲಿನ ಬಜೆಟ್‌ನಲ್ಲಿ ಉಲ್ಲೇಖಿಸಿದ್ದ ಕೆಲವು ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದ್ದ ಅನುದಾನವನ್ನು ಅದಕ್ಕೆ ಅಂಗೀಕಾರ ನೀಡುವ ವೇಳೆ ಮರುಹಂಚಿಕೆ ಮಾಡಿದೆ. ಬಜೆಟ್‌ನಲ್ಲಿ ಯಡಿಯೂರು ವಾರ್ಡ್‌ ವ್ಯಾಪ್ತಿಯಲ್ಲಿ 12 ಲೆಕ್ಕ ಶೀರ್ಷಿಕೆಗಳಡಿ ವಿವಿಧ ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದ ₹ 4.75 ಕೋಟಿ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ಮರುಹಂಚಿಕೆ ಮಾಡಲಾಗಿದೆ.

2021ರ ಮಾರ್ಚ್‌ 27ರಂದು ಬಜೆಟ್‌ ಮಂಡಿಸಿದ್ದ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ‘ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಜಾರಿಗೆ ತರುವುದು ಬಜೆಟ್‌ನ ಮೂಲಮಂತ್ರ’ ಎಂದು ಸ್ಪಷ್ಟಪಡಿಸಿದ್ದರು.

‘ಪಾಲಿಕೆ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ನಿರ್ವಹಣಾ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲು ಆದ್ಯತೆ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಕೆರೆ ಅಭಿವೃದ್ಧಿಗೆ ಹೊರತಾಗಿ ಬೇರೆ ಯಾವುದೇ ಇಲಾಖೆಯಲ್ಲೂ ಹೊಸ ಕಾಮಗಾರಿಗಳನ್ನು ಕೈಗೊಳ್ಳದಿರಲು ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬಜೆಟ್‌ ಪುಸ್ತಕದಲ್ಲೇ ಸ್ಪಷ್ಟಪಡಿಸಲಾಗಿತ್ತು.

ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ಉದ್ಯಾನಗಳ ನಿರ್ವಹಣೆಗೆ ಎಸ್ಕ್ರೋ ಖಾತೆಯಲ್ಲಿ ಒಟ್ಟು ₹ 50 ಕೋಟಿ ಅನುದಾನವನ್ನು ಬಜೆಟ್‌ನಲ್ಲೇ ಕಾಯ್ದಿರಿಸಲಾಗಿತ್ತು. ಆದರೂ, ಪಾಲಿಕೆಯ ಉಳಿದೆಲ್ಲ ವಾರ್ಡ್‌ಗಳನ್ನು ಬಿಟ್ಟು ಕೇವಲ ಯಡಿಯೂರು ವಾರ್ಡ್‌ನ ಉದ್ಯಾನಗಳ ನಿರ್ವಹಣೆ ಮತ್ತಿತರ ಕೆಲಸಗಳಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಬಗ್ಗೆ ವಿವಿಧ ‍ಪಕ್ಷಗಳ ಅನೇಕ ಮುಖಂಡರು, ಪಾಲಿಕೆಯ ಮಾಜಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಬಜೆಟ್‌ನಲ್ಲಿ ಯಡಿಯೂರು ವಾರ್ಡ್‌ನಲ್ಲಿರುವ ಹಿತ್ತಾಳೆ ಪುತ್ಥಳಿಯೊಂದಕ್ಕೆ ಪಾಲಿಷ್‌ ಮಾಡಿಸಿ ಬಣ್ಣ ಬಳಿಯುವುದಕ್ಕಾಗಿಯೇ ₹ 20 ಲಕ್ಷ ಕಾಯ್ದಿರಿಸಲಾಗಿತ್ತು. ‘ಆರ್ಥಿಕ  ಮುಗ್ಗಟ್ಟಿನ ಕಾರಣ ಹೇಳಿ ಬಜೆಟ್‌ ಗಾತ್ರವನ್ನು ತಗ್ಗಿಸಿದ್ದೀರಿ. ಇಂತಹ ಸಂದರ್ಭದಲ್ಲಿ ಪುತ್ಥಳಿಗೆ ಪಾಲಿಷ್‌ ಮಾಡಿಸುವುದಕ್ಕೆ ₹ 20 ಲಕ್ಷ ಕಾಯ್ದಿರಿಸುವುದು ಎಷ್ಟು ಸರಿ’ ಎಂದು ಬಜೆಟ್‌ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಅಧಿಕಾರಿಗಳನ್ನು ಕೆಲವರು ಪ್ರಶ್ನೆ ಮಾಡಿದ್ದರು.

ಅವಾಕ್ಕಾದ ಅಧಿಕಾರಿಗಳು!

ಹಿರಿಯ ಅಧಿಕಾರಿಗಳು ಬಜೆಟ್‌ ಪುಸ್ತಕವನ್ನು ಕೂಲಂಕಷವಾಗಿ ಗಮನಿಸಿದಾಗ, ತಮ್ಮ ಗಮನಕ್ಕೆ ತಾರದೆಯೇ ಯಡಿಯೂರು ವಾರ್ಡ್‌ನ ಕೆಲವೊಂದು ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಿರುವುದು ಕಂಡುಬಂದಿತ್ತು. 2021–22ನೇ ಸಾಲಿನ ಬಜೆಟ್‌ ರೂಪಿಸುವಾಗಲೇ ವಿಳಂಬವಾಗಿತ್ತು. ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ತರಾತುರಿಯಲ್ಲಿ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡಿದ್ದರು. ಕೊನೆಯ ಹಂತದ ಗಡಿಬಿಡಿಯ ಲಾಭ ಪಡೆದ ಯಡಿಯೂರು ವಾರ್ಡ್‌ನ ಸ್ಥಳೀಯ ಮುಖಂಡರೊಬ್ಬರು ಕೆಲ ಸಿಬ್ಬಂದಿಯ ನೆರವು ಪಡೆದು ತಮ್ಮ ವಾರ್ಡ್‌ನ ಕೆಲವು ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆಯಾಗುವಂತೆ ನೋಡಿಕೊಂಡಿದ್ದರು.

ತಮ್ಮ ಕಣ್ತಪ್ಪಿಸಿ ಯಡಿಯೂರು ವಾರ್ಡ್‌ನ ಕೆಲವು ಕಾರ್ಯಕ್ರಮಗಳಿಗೆ ಬಜೆಟ್‌ನ ಆಶಯಕ್ಕೆ ವಿರುದ್ಧವಾಗಿ ಅನುದಾನ ಹಂಚಿಕೆ ಮಾಡಿದ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಪಾಲಿಕೆಯ ಹಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದರು. ಯಡಿಯೂರು ವಾರ್ಡ್‌ಗೆ ಹಂಚಿಕೆಯಾಗಿದ್ದ ₹ 4.75 ಕೋಟಿ ಅನುದಾನಕ್ಕೆ ಬಜೆಟ್‌ ಅಂಗೀಕರಿಸುವ ವೇಳೆ, ಕತ್ತರಿ ಹಾಕಿ, ಅದನ್ನು ಬೇರೆ ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದರು. ಈ ತಿದ್ದುಪಡಿಗೆ ಸಂಬಂಧಿಸಿದ ಟಿಪ್ಪಣಿಯನ್ನು ಬಿಬಿಎಂಪಿ ಆಯುಕ್ತರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮುಂದೆ 2021ರ ಮಾರ್ಚ್‌ 30ರಂದು ಮಂಡಿಸಿದ್ದರು. ಈ ತಿದ್ದುಪಡಿಗಳನ್ನು ಒಪ್ಪಿದ ನೂತನ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರು ಅನುಮೋದನೆಗಾಗಿ ಏ.07ರಂದು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು.  ನಗರಾಭಿವೃದ್ಧಿ ಇಲಾಖೆಯೂ ಈ ತಿದ್ದುಪಡಿಗಳನ್ನು ಒಪ್ಪಿ ಪರಿಷ್ಕೃತ ಬಜೆಟ್‌ಗೆ ಅನುಮೋದನೆ ನೀಡಿದೆ.

ಯಡಿಯೂರು ವಾರ್ಡ್‌: ಅನುದಾನ ಕಡಿತ ವಿವರ

ಕಾರ್ಯಕ್ರಮ; 2021–22ನೇ ಸಾಲಿನ ಬಜೆಟ್‌ನಲ್ಲಿ ಹಂಚಿಕೆಯಾಗಿದ್ದ ಮೊತ್ತ (₹ ಲಕ್ಷ); ಪರಿಷ್ಕೃತ ಮೊತ್ತ (₹ ಲಕ್ಷ)

ಸೌತ್‌ ಎಂಡ್‌ ವೃತ್ತದ ಗೋಪುರ ಗಡಿಯಾರ ನಿರ್ವಹಣೆ; 3; 0

ಸಮುದಾಯಭವನ, ಶಾಲಾ ಗ್ರಂಥಾಲಯ, ಅಂಗನವಾಡಿ ಕಟ್ಟಡ, ಆರೋಗ್ಯ ಕೇಂದ್ರ ನಿರ್ವಹಣೆ; 38; 0

ಕ್ರೀಡಾಂಗಣ, ಹೊಲಿಗೆ ಕೇಂದ್ರಗಳು, ಮಾರುಕಟ್ಟೆ ಸಂಕೀರ್ಣಗಳ ಸ್ವಚ್ಛತೆ ಮತ್ತು ಭದ್ರತಾ ವ್ಯವಸ್ಥೆಗೆ; 49.50; 0

ವಿವಿಧೋದ್ದೇಶ ಕಟ್ಟಡ, ಸೌತ್‌ ಎಂಡ್‌ ವೃತ್ತದ ಹೊಸ ಉದ್ಯಾನ ಮತ್ತು ಇತರ ಕಚೇರಿ ನಿರ್ವಹಣೆ ಮತ್ತು ಸ್ವಚ್ಛತೆ; 30; 0

ಯಡಿಯೂರು ಕಾಂಪ್ಲೆಕ್ಸ್‌, ವಾಜಪೇಯಿ ಆಟದ ಮೈದಾನ, ಡಯಾಲಿಸಿಸ್‌ ಕೇಂದ್ರ, ಪ್ರಾಥಮಿಕ ಆರೋಗ್ಯ, ಅಂಬರ ಚುಂಬನ, ಮಹಿಳಾ ಮಂಡಳಿ ಮತ್ತು ಟೈಲರಿಂಗ್‌ ಕೇಂದ್ರಗಳ ಸ್ವಚ್ಛತೆಗಾಗಿ; 35; 0

ಯಡಿಯೂರು ಕೆರೆಯ ವಾರ್ಷಿಕ ನಿರ್ವಹಣೆ; 10; 0

ಉದ್ಯಾನಗಳ ನಿರ್ವಹಣೆ; 90; 0

ಉದ್ಯಾನ, ವಿದ್ಯುದ್ದೀಪ, ಪಾಲಿಕೆ ಕಟ್ಟಡಗಳ ವಿದ್ಯುತ್‌ ಕಾರ್ಯ, ಜನರೇಟರ್‌, ನೀರಿನ ಚಿಲುಮೆ ಮತ್ತು ಸಿಸಿಟಿವಿ ಕ್ಯಾಮೆರಾ ನಿರ್ವಹಣೆ; 25; 0

ಯಡಿಯೂರು ಕೆರೆ ಉದ್ಯಾನದ ‘ಬಾನಾಡಿ ಮರಳಿ ಬಾ ಗೂಡಿಗೆ’ ಪಕ್ಷಿಗಳ ತಾಣದ ವಾರ್ಷಿಕ ನಿರ್ವಹಣೆ; 5; 0

ಹಿತ್ತಾಳೆ ಪುತ್ಥಳಿಗೆ ಪಾಲಿಷ್‌ ಮಾಡಿಸಿ ಬಣ್ಣ ಬಳಿಯುವುದು; 20; 0

ಉದ್ಯಾನಗಳ ಭದ್ರತಾ ವ್ಯವಸ್ಥೆ; 90; 0

ನೀರು ಸರಬರಾಜು ಕೊಳವೆಮಾರ್ಗ ಮತ್ತು ಕೊಳವೆ ಬಾವಿಗಳ ವಾರ್ಷಿಕ ನಿರ್ವಹಣೆ; 20; 0

ಸಾವಯವ ಗೊಬ್ಬರ ಘಟಕ ಮತ್ತು ಎರೆಹುಳ ಗೊಬ್ಬರ ಘಟಕಗಳ ಆಡಳಿತ ನಿರ್ವಹಣೆ; 60; 0

ಕಡಿತಗೊಂಡ ಅನುದಾನ ಮರುಹಂಚಿಕೆ ವಿವರ

ಕಾರ್ಯಕ್ರಮ; ಈ ಹಿಂದೆ ಕಾಯ್ದಿರಿಸಿದ್ದ ಮೊತ್ತ (₹ ಲಕ್ಷ); ಪರಿಷ್ಕೃತ ಮೊತ್ತ (₹ ಲಕ್ಷ)

ನಿರ್ವಹಣೆ ಮತ್ತು ದುರಸ್ತಿ– ಉದ್ಯಾನ, ಆಟದ ಮೈದಾನ, ಸ್ಮಶಾನಗಳ ವಿದ್ಯುತ್‌ ಪರಿಕರ ಅಳವಡಿಕೆ; 200; 203

ಹಾಲಿ ಸಮುದಾಯ ಭವನಗಳ ನಿರ್ವಹಣೆ; 200; 238

ಭದ್ರತಾ ಸೇವೆಗಳ ವೆಚ್ಚಗಳು; 350; 464.50

ಒಳಚರಂಡಿ ನೀರು ಸಂಸ್ಕರಣಾ ಘಟಕಗಳು ಸೇರಿ ಕೆರೆಗಳ ನಿರ್ವಹಣೆ ಎಸ್ಕ್ರೊ ಖಾತೆಗೆ; 2,000; 2010

ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ಉದ್ಯಾನಗಳ ನಿರ್ವಹಣೆಗೆ ಎಸ್ಕ್ರೊ ಖಾತೆಗೆ (ಪ್ರತಿ ವಲಯಕ್ಕೆ ₹ 8 ಕೋಟಿಯಂತೆ); 5,000; 5,230

ಕೊಳವೆಬಾವಿ ಕೊರೆಯುವುದು, ನಿರ್ಹವಣೆ, ಪಂಪ್‌ಸೆಟ್‌, ಪೈಪ್‌ಲೈನ್‌ ಅಳವಡಿಕೆ; 500; 520

ಉದ್ಯಾನಗಳಲ್ಲಿ ಸಾವಯವ ಗೊಬ್ಬರ ಉತ್ಪಾದನೆ; 55; 115

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು