ಗುರುವಾರ , ಆಗಸ್ಟ್ 22, 2019
21 °C

ಸಿ.ಎಂ ಸಂಬಂಧಿ ಅಶೋಕ್ ಸ್ಪರ್ಧೆ ಮೈಮುಲ್ ಚುನಾವಣೆ ಮುಂದಕ್ಕೆ

Published:
Updated:

ಬೆಂಗಳೂರು: ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಂಗಿ ಮಗ ಎಸ್.ಸಿ.ಅಶೋಕ್ ಸ್ಪರ್ಧಿಸಿದ್ದು, ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲಾಗಿದೆ.

ಮೈಮುಲ್ ನಾಮನಿರ್ದೇಶಿತ ಸದಸ್ಯರನ್ನಾಗಿ ಅಶೋಕ್ ಅವರನ್ನು ನೇಮಕ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈಗ ಅಧ್ಯಕ್ಷ ಸ್ಥಾನ ಕೊಡಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿಗ ಸಿದ್ದೇಗೌಡ ಹಾಗೂ ಅಶೋಕ್ ನಾಮಪತ್ರ ಸಲ್ಲಿಸಿದ್ದರು. ಅಶೋಕ್ ನಾಮಪತ್ರಕ್ಕೆ ನಿರ್ದೇಶಕ ಎ.ಟಿ.ಸೋಮಶೇಖರ್ ಸೂಚಕರಾಗಿದ್ದು, ಇವರು ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್ ಬೆಂಬಲಿಗರು. ಮೈಮುಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಜೆಡಿಎಸ್ ಬೆಂಬಲಿಗ ಮಹೇಶ್ ಅನುಮೋದಿಸಿದ್ದರು.

ಜೆಡಿಎಸ್‌ ಬೆಂಬಲಿಗ 7 ನಿರ್ದೇಶಕರು ಮಾತ್ರ ಚುನಾವಣೆ ಸಭೆಗೆ ಬಂದಿದ್ದು, ಇತರ ನಿರ್ದೇಶಕರು ಗೈರಾಗಿದ್ದರು. ಸೋಲು ಖಚಿತವಾಗುತ್ತಿದ್ದಂತೆ ಅಶೋಕ್ ಸಹ ಸಭೆಗೆ ಆಗಮಿಸಲಿಲ್ಲ. ಅಧಿಕಾರಿಗಳೂ ಸಹ ಸಭೆಗೆ ಹೋಗದಂತೆ ನೋಡಿಕೊಂಡು, ಕೋರಂ ಕೊರತೆಯ ಕಾರಣ ನೀಡಿ ಸಭೆ ಮುಂದೂಡಿಸುವಲ್ಲಿ ಅಶೋಕ್ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಆಗಸ್ಟ್ 14ಕ್ಕೆ ಸಭೆ ಮುಂದೂಡಲಾಗಿದೆ.

ಬಿ.ಎಸ್.ಯಡಿಯೂರಪ್ಪ ನಿರ್ದೇಶನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆಗೆ ಹಾಜರಾಗದೆ ಚುನಾವಣೆ ಮುಂದೂಡಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವು ನೀಡುವ ಬದಲು ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜೆಡಿಎಸ್–ಕಾಂಗ್ರೆಸ್ ಬೆಂಬಲಿಗ ನಿರ್ದೇಶಕರನ್ನು ಸೆಳೆಯುವುದು, ಮತದ ಹಕ್ಕು ಹೊಂದಿರುವ ಎಲ್ಲ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ನೋಡಿಕೊಂಡು ಅಶೋಕ್‌ಗೆ ಅಧ್ಯಕ್ಷ ಪಟ್ಟ ದೊರಕಿಸಿಕೊಡುವ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಟೀಕೆ

‘ಕೆಎಂಎಫ್‌ಗೆ ಸಂಬಂಧಿಕರನ್ನು ನೇಮಿಸುವ ಬದಲು ಸಚಿವ ಸಂಪುಟ ರಚನೆ ಮಾಡಿದ್ದರೆ ಪ್ರವಾಹ ಪರಿಸ್ಥಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೆ, ಏಕಚಕ್ರಾಧಿಪತಿಗಳೇ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಸಂಪುಟ ರಚನೆಗೆ ಅನುಮೋದನೆ ಕೊಡಲು ಸಮಯವಿಲ್ಲದ ನಿಮ್ಮ ಹೈಕಮಾಂಡ್, ಕೆಎಂಎಫ್‌ಗೆ ಸದಸ್ಯರ ನೇಮಕಕ್ಕೆ ಆದ್ಯತೆ ನೀಡಲು ಹೇಳಿತ್ತೆ’ ಎಂದು ಟ್ವೀಟ್‌ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಟೀಕಿಸಿದ್ದಾರೆ.

Post Comments (+)