‘ಹೊಡೆದು ಕೊಂದು, ಆಸ್ಪತ್ರೆಗೆ ಮೃತದೇಹ ಸಾಗಣೆ’

ಬೆಂಗಳೂರು: ಯಲಹಂಕ ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿರುವ ಶ್ರೀಸಾಯಿ ದೀನಬಂಧು ಪುನರ್ವಸತಿ ಕೇಂದ್ರದಲ್ಲಿ ಆರೀಫ್ (30) ಎಂಬುವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ ಆರೋಪದಡಿ ಕೇಂದ್ರದ ಕೆಲಸಗಾರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
‘ಪ್ರವೀಣ್ ಹಾಗೂ ಲೂಯಿಸ್ ಬಂಧಿತರು. ಇವರಿಬ್ಬರು ಕೇಂದ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಮದ್ಯವ್ಯಸನಿ ಆಗಿದ್ದ ಆರೀಫ್ ಅವರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಇತ್ತೀಚೆಗೆ ಕೇಂದ್ರಕ್ಕೆ ಸೇರಿಸಲಾಗಿತ್ತು’ ಎಂದು ತಿಳಿಸಿದರು.
ಹಲ್ಲೆ, ಮಲಗಿದ್ದಲ್ಲೇ ಸಾವು: ‘ಬುಧವಾರ ಸ್ನಾನ ಮಾಡಲು ಹೊರಟಿದ್ದ ಆರೀಫ್, ಬಿಸಿ ನೀರು ಕೊಡುವಂತೆ ಕೆಲಸಗಾರರನ್ನು ಕೇಳಿದ್ದರು. ಬಿಸಿ ನೀರು ಇಲ್ಲವೆಂದು ಹೇಳಿದ್ದ ಕೆಲಸಗಾರರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿ, ಪರಸ್ಪರ ಗಲಾಟೆ ಶುರುವಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳಾದ ಪ್ರವೀಣ್ ಹಾಗೂ ಲೂಯಿಸ್, ಆರೀಫ್ ಅವರನ್ನು ಥಳಿಸಿದ್ದರು. ಕೋಲಿನಿಂದ ದೇಹದ ಹಲವು ಭಾಗಗಳಿಗೆ ಹೊಡೆದಿದ್ದರು. ರಕ್ತ ಸೋರುತ್ತಿದ್ದ ಸ್ಥಿತಿಯಲ್ಲೇ ಆರೀಫ್ ಕೊಠಡಿಗೆ ಹೋಗಿ ಮಲಗಿದ್ದರು. ಅವರಿಗೆ ಯಾವುದೇ ಚಿಕಿತ್ಸೆ ಸಹ ಕೊಡಿಸಿರಲಿಲ್ಲ. ಅವರತ್ತ ಯಾರೂ ಹೋಗಿರಲಿಲ್ಲ. ಮಲಗಿದ್ದ ಜಾಗದಲ್ಲೇ ಅವರು ರಾತ್ರಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
ಮೃತದೇಹ ಆಸ್ಪತ್ರೆಗೆ ಸಾಗಣೆ: ‘ಗುರುವಾರ ಬೆಳಿಗ್ಗೆ ಆರೀಫ್ ಎಚ್ಚರಗೊಂಡಿರಲಿಲ್ಲ. ಕೆಲಸಗಾರರು ಎಬ್ಬಿಸಲು ಹೋದಾಗ ಮೃತಪಟ್ಟಿದ್ದು ಗೊತ್ತಾಗಿತ್ತು. ಗಾಬರಿಗೊಂಡ ಕೆಲಸಗಾರರು, ಮೃತದೇಹವನ್ನು ತರಾತುರಿಯಲ್ಲಿ ಯಲಹಂಕ ಆಸ್ಪತ್ರೆಗೆ ಸಾಗಿಸಿದ್ದರು. ಆರೀಫ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆಂದು ಸುಳ್ಳು ಹೇಳಿದ್ದರು.’
‘ಮೃತದೇಹದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಆ ಬಗ್ಗೆ ಕೆಲಸಗಾರರನ್ನು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು’ ಎಂದು ಅವರು ಹೇಳಿದರು.
‘ಕೇಂದ್ರ ಬಂದ್ ಮಾಡಲು ಕ್ರಮ’
‘ಮದ್ಯದ ಚಟ ಬಿಡಿಸಲು ಚಿಕಿತ್ಸೆ ನೀಡಬೇಕಾದ ಕೇಂದ್ರದ ಕೆಲಸಗಾರರೇ ಆರೀಫ್ ಅವರನ್ನು ಕೊಂದಿದ್ದಾರೆ. ಕೇಂದ್ರದಲ್ಲಿರುವ ಇತರರಿಗೆ ಕೆಲಸಗಾರರು ದೈಹಿಕವಾಗಿ ಹಲ್ಲೆ ಮಾಡುತ್ತಿರುವ ಮಾಹಿತಿ ಇದೆ. ಹೀಗಾಗಿ, ಕೇಂದ್ರವನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
‘ಸದ್ಯ ಕೇಂದ್ರದಲ್ಲಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಮುಂದುವರಿಯಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.