ಅಮಾನಿ ಕೆರೆಯಲ್ಲಿ ದೋಣಿ ವಿಹಾರ ವ್ಯವಸ್ಥೆ

7

ಅಮಾನಿ ಕೆರೆಯಲ್ಲಿ ದೋಣಿ ವಿಹಾರ ವ್ಯವಸ್ಥೆ

Published:
Updated:

ಬೆಂಗಳೂರು: ಯಲಹಂಕದ ಅಮಾನಿಕೆರೆಯಲ್ಲಿ ದೋಣಿವಿಹಾರದ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿಯು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಅನುಮತಿ ನೀಡಿದೆ. ಇದರಿಂದ ಈ ಕೆರೆಯು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಮಾರ್ಪಾಡಾಗುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯಲಿದೆ.

ಕೆರೆಯಲ್ಲಿ ಬೋಟಿಂಗ್ ಆರಂಭಿಸಲು ಕೆಎಸ್‌ಟಿಡಿಸಿಗೆ 2 ವರ್ಷಗಳಿಗೆ ಗುತ್ತಿಗೆ ನೀಡಿದ್ದು, ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆದುಕೊಂಡಿದೆ. ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಈ ಕೆರೆಯು, 300 ಎಕರೆ ವಿಸ್ತೀರ್ಣ ಹೊಂದಿದೆ. ಕೆಲವು ವರ್ಷಗಳ ಹಿಂದೆ ಚರಂಡಿ ಮತ್ತು ಸುತ್ತಲಿನ ಕೈಗಾರಿಕೆಗಳ ತ್ಯಾಜ್ಯನೀರು ಸೇರುವುದರ ಜೊತೆಗೆ ಹುಲ್ಲಿನ ಜೊಂಡು ಬೆಳೆದುಕೊಂಡು ಕೊಳಚೆಗುಂಡಿಯಂತಾಗಿ ಗಬ್ಬೆದ್ದು ನಾರುತ್ತಿತ್ತು. ಇದರ ದುರ್ವಾಸನೆಯಿಂದ ಕೆರೆಯ ಸುತ್ತಮುತ್ತಲ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ನಂತರ ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗವು ಹಲವಾರು ಆಯಾಮಗಳಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುವ ಮೂಲಕ ಈಗ ಕೆರೆಯ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ.

ಕೆರೆಯ ಪರಿಸರ ಸ್ವಚ್ಛವಾಗಿ ವಿವಿಧ ಜಾತಿಯ ಪಕ್ಷಿಗಳು ಹಾಗೂ ಜಲಚರಗಳಿಗೆ ಆಶ್ರಯ ನೀಡುವ ತಾಣವಾಗಿ ಬದಲಾಗಿದೆ. ಸ್ಥಳೀಯ ನಾಗರಿಕರು, ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಕಾಳಜಿಯಿಂದ ಇಂದು ಸೌಂದರ್ಯದ ಸೊಬಗನ್ನು ಮೈದುಂಬಿಕೊಂಡು ಕಂಗೊಳಿಸುವ ಮೂಲಕ ಆಕರ್ಷಣೆಯ ತಾಣವಾಗಿ ಜನರ ಗಮನ ಸೆಳೆಯುತ್ತಿದೆ.

ಸೌಲಭ್ಯಗಳು: ಕೆರೆಯ ಸುತ್ತ ನಡಿಗೆ ಪಥ, ಸೈಕಲ್ ಟ್ರ್ಯಾಕ್, ಸುಂದರ ಉದ್ಯಾನ, ವಾಯುವಿಹಾರಿಗಳಿಗಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ವಿಶ್ರಾಂತಿ ಗೃಹಗಳು, ಸುಸಜ್ಜಿತವಾದ ಇ-ಶೌಚಾಲಯಗಳು ಮತ್ತು ಕೆರೆಯ ಸುತ್ತಲೂ ಎಲ್ಇಡಿ ದೀಪಗಳು, ಎಫ್.ಎಂ ರೇಡಿಯೊ, ಸಿಸಿಟಿವಿ ಕ್ಯಾಮೆರಾ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಅಂತರರಾಷ್ಟ್ರೀಯ ಮಟ್ಟದ ತೆರೆದ ಜಿಮ್‌ಗಳು ಹಾಗೂ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಕೆರೆಯ ಮಧ್ಯದಲ್ಲಿರುವ ದ್ವೀಪವನ್ನು ಪಕ್ಷಿಧಾಮವಾಗಿ ರೂಪಿಸಲಾಗಿದ್ದು, ಕರೆಯ ಸುತ್ತಲೂ ವಿವಿಧ ತಳಿಯ ಸಾವಿರಾರು ಗಿಡಗಳನ್ನು ನೆಡಲಾಗಿದೆ. ವಿಶೇಷವಾಗಿ ಪರ್ಗೋಲ, ಗಂಗಮ್ಮ ದೇವಸ್ಥಾನ ಹಾಗೂ ಕರಗಮಂಟಪ ನಿರ್ಮಾಣ ಮಾಡಿರುವುದರಿಂದ ಕೆರೆಗೆ ವಿಶೇಷ ಮೆರುಗು ಬಂದಂತಾಗಿದೆ.
-ಡಿ.ಸುರೇಶ್

*
ಕೆರೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ₹30 ಕೋಟಿ ಅನುದಾನವನ್ನು ಬಳಸಿಕೊಳ್ಳಲಾಗಿದ್ದು, ಈಗಾಗಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. 2 ತಿಂಗಳೊಳಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಬೋಟಿಂಗ್ ಮತ್ತು ಮನೋ
ರಂಜನಾ ಕಾರ್ಯಕ್ರಮಗಳು ಆರಂಭವಾಗಲಿವೆ. ಅಳ್ಳಾಳಸಂದ್ರ ಮತ್ತು ಅಟ್ಟೂರು ಕೆರೆಗಳಲ್ಲಿಯೂ ಇದೇ ರೀತಿಯ ಚಟುವಟಿಕೆಗಳನ್ನು ಆರಂಭಿಸಲಾಗುವುದು.
–ಎಸ್.ಆರ್.ವಿಶ್ವನಾಥ್, ಶಾಸಕ

*
‘ಅಂತರ್ಜಲ ಮಟ್ಟ ಹೆಚ್ಚಳ’ ಕೆರೆಯಲ್ಲಿ ನೀರು ತುಂಬಿರುವುದರಿಂದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿರುವ ಈ ಕೆರೆಯನ್ನು ಮತ್ತೆ ಕಲುಷಿತವಾಗದಂತೆ ಉಳಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ.
-ಡಾ.ಅ.ಬ.ಶಿವಕುಮಾರ್, ಅಧ್ಯಕ್ಷ, ಜಲಸಿರಿ ಪ್ರತಿಷ್ಠಾನ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !