ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಪಿಎಂಸಿ ಕಾಯ್ದೆಗೆ ಸ್ವಾರ್ಥಿಗಳಿಂದ ವಿರೋಧ’

ವಾಜಪೇಯಿ ಜನ್ಮದಿನದ ಅಂಗವಾಗಿ ಕಿಸಾನ್‌ ಸಮ್ಮಾನ್‌ ಕಾರ್ಯಕ್ರಮ
Last Updated 25 ಡಿಸೆಂಬರ್ 2020, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಎಪಿಎಂಸಿ ಕಾಯ್ದೆಯನ್ನು ರೈತರ ಒಳಿತಿಗಾಗಿ ಜಾರಿಗೆ ತರಲಾಗಿದೆ. ಆದರೆ, ಕೆಲವು ಸ್ವಾರ್ಥಿಗಳು ಇದನ್ನು ವಿರೋಧಿಸಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ನಗರದ ಯಶವಂತಪುರದ ಎಪಿಎಂಸಿ ಯಾರ್ಡ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತನು ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಆದರೆ, ಇದನ್ನು ಕೆಲವು ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ. ಆದರೆ, ಶೇ 99ರಷ್ಟು ರೈತರು ಇದನ್ನು ಸ್ವಾಗತಿಸಿದ್ದಾರೆ’ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಮಾಡಿದ ದೇಶದ ಹಿರಿಯರ ಮನಸ್ಸಿಗೆ ನೆಮ್ಮದಿ ಕೊಡುವಂತಹ ರಾಜಕೀಯ ನಡೆದಿಲ್ಲ. ದೇಶ ಮೊದಲು ಎಂಬುದಕ್ಕೆ ಅರ್ಥ ಬರುವ ರೀತಿಯಲ್ಲಿ ದೇಶದಲ್ಲಿ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‍ನವರು ದೇಶವನ್ನು ಲೂಟಿ ಮಾಡುವ ಕೆಲಸ ಮಾತ್ರ ಮಾಡಿದರು’ ಎಂದು ಟೀಕಿಸಿದರು.

‘ಸ್ವಾತಂತ್ರ್ಯ ಬಂದ ನಂತರವೂ ರೈತನು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರಲಿಲ್ಲ. ರೈತರ ಬೆಳೆದ ಉತ್ಪನ್ನಗಳು ರೈತನದ್ದಾಗಿರಲಿಲ್ಲ. ಅದು ದಲ್ಲಾಳಿಗಳದ್ದಾಗಿತ್ತು. ಅದರಿಂದ ಹೊರಗೆ ತರಬೇಕು ಎಂದು ಕಾನೂನು ತಿದ್ದುಪಡಿ ತರಲಾಗಿದೆ’ ಎಂದು ವಿವರಿಸಿದರು.

ಸಹಕಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್‌, ‘ಯಾವುದೇ ಎಪಿಎಂಸಿಗಳನ್ನು,ಸ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಎಪಿಎಂಸಿಗಳಲ್ಲಿ ಮೂಲಸೌಲಭ್ಯ ಒದಗಿಸಲು ₹205 ಕೋಟಿ ಅನುದಾನವನ್ನು ಈ ವರ್ಷ ಬಿಡುಗಡೆ ಮಾಡಲಾಗಿದೆ’ ಎಂದರು.

‘ಸುಮಾರು 8500 ಎಕರೆ ವಿಸ್ತಾರದಲ್ಲಿ ಎಪಿಎಂಸಿಗಳು ಇವೆ. ಕೋಟ್ಯಂತರ ರೈತರು ವ್ಯವಹಾರ ಮಾಡುತ್ತಿದ್ದಾರೆ. ಈ ಕೃಷಿ ಉತ್ಪನ್ನ ಮಾರುಕಟ್ಟೆಗಳ ಸಮಿತಿಗಳನ್ನು ಸಬಲಗೊಳಿಸಲು, ರೈತರಿಗೆ ಎಲ್ಲ ಅನುಕೂಲ ಒದಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲ 162 ಎಪಿಎಂಸಿಗಳಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT