ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನಭಾರತಿ’ಯಲ್ಲಿ ತಲೆ ಎತ್ತಲಿದೆ ಯೋಗ ವಿಶ್ವವಿದ್ಯಾಲಯ

₹1000 ಕೋಟಿಯ ಯೋಜನೆ * ದೇಶದ ಗಮನ ಸೆಳೆಯಲಿದೆ ನೂತನ ವಿ.ವಿ
Last Updated 12 ಸೆಪ್ಟೆಂಬರ್ 2020, 19:09 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಯೋಗ ವಿಶ್ವವಿದ್ಯಾಲಯ ತಲೆ ಎತ್ತಲಿದೆ. ₹1,000 ಕೋಟಿ ಮೊತ್ತದ ಈ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು.

‘ಪ್ರಧಾನಮಂತ್ರಿಯವರ ಸಚಿವಾಲಯದ ಸೂಚನೆಯಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಈ ಯೋಗ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮುಂದಾಗಿದೆ. ಜ್ಞಾನಭಾರತಿ ಕ್ಯಾಂಪಸ್‌ನ 15 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯ ತಲೆ ಎತ್ತಲಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಗಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಜಾಗ ಗುರುತಿಸಲು ಯುಜಿಸಿ ಹೇಳಿತ್ತು. ಬೆಂಗಳೂರಿನ ಜಿಗಣಿಯಲ್ಲಿನ ಯೋಗ ಕೇಂದ್ರದವರು ಈ ಯೋಜನೆಗೆ 10 ಎಕರೆ ನೀಡಲು ಮುಂದಾಗಿದ್ದರು. ಕಣಿವೆ ಪ್ರದೇಶದಲ್ಲಿದ್ದ ಆ ಜಾಗವನ್ನು ತಿರಸ್ಕರಿಸಲಾಯಿತು’ ಎಂದರು.

‘ಈ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ 25 ಎಕರೆ ಬೇಕು ಎಂದು ಯುಜಿಸಿಯ ಪ್ರಧಾನ ಕಾರ್ಯದರ್ಶಿ ರಾಜ್ಯ ಸರ್ಕಾರವನ್ನು ಕೋರಿದ್ದರು. ಈ ಪ್ರಸ್ತಾವವನ್ನು ಸರ್ಕಾರವು ಶಿಕ್ಷಣ ಇಲಾಖೆಗೆ ಕಳುಹಿಸಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಪ್ರಾಂಗಣದ 15 ಎಕರೆಯನ್ನು ಈ ಉದ್ದೇಶಕ್ಕೆ ನೀಡಬೇಕು ಎಂದು ಶಿಕ್ಷಣ ಇಲಾಖೆ ನಮಗೆ ಸೂಚಿಸಿತು. ಈ ಪ್ರಸ್ತಾವವನ್ನು ಸಿಂಡಿಕೇಟ್‌ ಮುಂದೆ ಇಟ್ಟು ಅನುಮೋದನೆ ಪಡೆಯಲಾಗಿದೆ’ ಎಂದು ಅವರು ಹೇಳಿದರು.

‘ಕ್ಯಾಂಪಸ್‌ನಲ್ಲಿರುವ 15 ಎಕರೆ ಜಾಗವನ್ನು ಯುಜಿಸಿಗೆ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿದೆ. ಜೀವ ವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ’ ಎಂದು ಅವರು ವಿವರಿಸಿದರು.

ಅನುಕೂಲಗಳೇನು?

‘ಕ್ಯಾಂಪಸ್‌ನಲ್ಲಿ ಈಗಾಗಲೇ ಯೋಗ ಅಧ್ಯಯನ ಕೇಂದ್ರ ಇದೆ. ಇಲ್ಲಿಯೇ ವಿಶ್ವವಿದ್ಯಾಲಯ ನಿರ್ಮಾಣವಾದರೆ, ಕೇಂದ್ರಕ್ಕೆ ಸಾಕಷ್ಟು ಪ್ರಯೋಜನಗಳು ಆಗಲಿವೆ. ತಜ್ಞರು ಭೇಟಿ ನೀಡುವುದಲ್ಲದೆ, ವಿಶ್ವವಿದ್ಯಾಲಯದ ಹಲವು ಯೋಜನೆಗಳ ಪ್ರಯೋಜನಗಳನ್ನು ಕೇಂದ್ರ ಪಡೆಯಲಿದೆ’ ಎಂದು ವೇಣುಗೋಪಾಲ್‌ ಹೇಳಿದರು.

‘ಹೊಸ ವಿಶ್ವವಿದ್ಯಾಲಯದಲ್ಲಿ ಯೋಗ ಮಾತ್ರವಲ್ಲದೆ, ಸಮಗ್ರ ಶಿಕ್ಷಣ ನೀಡಲಾಗುತ್ತದೆ. ಯೋಗ ವಿಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ಗಮನ ಸೆಳೆಯಲಿದೆ. ಅಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಯೋಗ ಕುರಿತು ತರಬೇತಿ, ಜ್ಞಾನ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT