ಬುಧವಾರ, ಜನವರಿ 19, 2022
25 °C
ಯೋಗಾನರಸಿಂಹ ಸ್ವಾಮಿ ದೇಗುಲ

ಮೇಲುಕೋಟೆ: ತಾತ್ಕಾಲಿಕ ಅರ್ಚಕರ ನೇಮಕ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ದೇವಾಲಯದ ತಾತ್ಕಾಲಿಕ ಅರ್ಚಕರನ್ನಾಗಿ ಭಾಷ್ಯಂ ಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯ ಮುಜರಾಯಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಕುರಿತಂತೆ ಯೋಗಾನರಸಿಂಹ ಸ್ವಾಮಿ ದೇವಾಲಯದ ಮೂಲ ಅರ್ಚಕ ನಾರಾಯಣ ಭಟ್ಟ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮಾನ್ಯ ಮಾಡಿದೆ. 

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಭಿನವ ರಮಾನಂದ ಅವರು, ‘ನಾರಾಯಣ ಭಟ್ಟರು ವಂಶಪಾರಂಪರ್ಯವಾಗಿ ತಮ್ಮ ಅರ್ಚಕ ಸೇವೆಯನ್ನು ಮುಂದುವರಿಸಿದ್ದಾರೆ. ಆಶೌಚದ ಅವಧಿಯಲ್ಲಿ ಅವರ ಬಂಧುಗಳೇ ಪೂಜಾ ಕೈಂಕರ್ಯಗಳನ್ನು ನಿಭಾಯಿಸುತ್ತಾರೆ. ಕಾರಣ ಅರ್ಚಕರ ಕುಟುಂಬದಲ್ಲಿ ಜನನ ಅಥವಾ ಸಾವುಗಳು ಸಂಭವಿಸಿದಾಗ ಉಂಟಾಗುವ ಮೈಲಿಗೆ ಸಂದರ್ಭದಲ್ಲಿ ಅರ್ಚಕರು ತಂತಮ್ಮ ಅನುಕೂಲ ತಕ್ಕಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುತ್ತಾರೆ’ ಎಂದರು.

‘ದೇಗುಲದ ಪಾರಂಪರಿಕ ಪದ್ಧತಿ, ಪೂಜಾ ವಿಧಾ‌ನಗಳ ಅನೂಚಾನ ಮುಂದುವರಿಕೆ ಹಾಗೂ ಒಡವೆಗಳ ಸಂರಕ್ಷಣೆ ಹಿತದೃಷ್ಟಿಯಿಂದ ಅರ್ಚಕರು ತಮ್ಮವರನ್ನೇ ಬದಲಿಯಾಗಿ ವ್ಯವಸ್ಥೆ ಮಾಡಿಕೊಂಡು ಬರುವುದು ಪರಿಪಾಟವಾಗಿದೆ. ಕಳೆದ 200 ವರ್ಷಕ್ಕೂ ಹೆಚ್ಚುಕಾಲದಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಬದಲಿಸಿದ ಸರ್ಕಾರದ ಕ್ರಮ ಕರ್ನಾಟಕ ಧರ್ಮಾದಾಯ ದತ್ತಿ ಕಾಯ್ದೆಗೆ ಅನುಗುಣವಾದ ನಿಯಮ 15 (3)ಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.

‘ಆಶೌಚದ ಅವಧಿಯ ಕಾರಣಕ್ಕಾಗಿ ಎನ್‌.ವೆಂಕಟಾಚಾರ್‌ ಅವರ ಸ್ಥಾನದಲ್ಲಿ ನಿವೃತ್ತ ಪ್ರಾಂಶುಪಾಲರೂ ಆದ 63 ವರ್ಷದ ಭಾಷ್ಯಂ ಸ್ವಾಮಿ ಅಲಿಯಾಸ್‌ ಅವರನ್ನು ತಾತ್ಕಾಲಿಕ ಅರ್ಚಕರನ್ನಾಗಿ ನೇಮಿಸಲಾಗಿತ್ತು. ಆದರೆ ಅವರಿಗೆ ಈ ಸ್ಥಾನ ನಿಭಾಯಿಸುವ ಪ್ರಾಥಮಿಕ ಅರ್ಹತೆಗಳಿಲ್ಲ. ಈ ಅಂಶವು ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ತಾತ್ಕಾಲಿಕ ನೇಮಕಕ್ಕೂ ಮೊದಲು ಪ್ರಸ್ತಾಪವಾಗಿತ್ತು. ಆದರೂ, ಮುಜರಾಯಿ ಇಲಾಖೆ ಕಾರ್ಯದರ್ಶಿ ಇವರನ್ನು ನೇಮಕ ಮಾಡಿರುವ ಆದೇಶ ಕಾನೂನುಬಾಹಿರವಾಗಿದೆ. ಆದ್ದರಿಂದ, ಈ ನೇಮಕದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು. ಈ ವಾದವನ್ನು ಎತ್ತಿಹಿಡಿದ ನ್ಯಾಯಪೀಠ ಅರ್ಜಿಯನ್ನು ಮಾನ್ಯ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು