ಬೆಂಗಳೂರು: ಕಬ್ಬನ್‌ರಸ್ತೆ ಮಾರ್ಗವಾಗಿ ಎಚ್‌ಎಎಲ್ ವಿಮಾನದತ್ತ ಭಾನುವಾರ ರಾತ್ರಿ ತೆರಳುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಾಹನ ಸಂಚಾರಕ್ಕೆ ಅಡ್ಡ ಬಂದ ಯುವಕರಾದ ಜಿಬ್ರಾನ್ (22) ಹಾಗೂ ಇಮ್ರಾನ್ (22) ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇಬ್ಬರು ನೀಲಸಂದ್ರದ ನಿವಾಸಿಗಳು. ಆರ್.ಟಿ.ನಗರದ ಕಾಲೇಜಿನಲ್ಲಿ ಓದುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಗಣ್ಯರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಅಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭಾನುವಾರ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅಮಿತ್ ಶಾ ರಾತ್ರಿ 10.45ರ ಸುಮಾರಿಗೆ ದೆಹಲಿಗೆ ಹೋಗಲು ಎಚ್‌ಎಎಲ್ ಏರ್‌ಪೋರ್ಟ್
ನತ್ತ ಹೊರಟಿದ್ದರು. ಬೆಂಗಾವಲು ವಾಹನಗಳು ಜೊತೆಗಿದ್ದವು. ಈ ಮಾರ್ಗದಲ್ಲಿ ಸಂಚರಿಸದಂತೆ ಸಾರ್ವಜನಿಕರ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಕಬ್ಬನ್ ರಸ್ತೆಯ ಮಣಿಪಾಲ್ ಸೆಂಟರ್ ವೃತ್ತದಲ್ಲಿ ಒಂದೇ ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ವಿದ್ಯಾರ್ಥಿಗಳು ಪೊಲೀಸರನ್ನು ತಪ್ಪಿಸಿ ರಸ್ತೆಗೆ ನುಗ್ಗಿದ್ದರು. ಅಮಿತ್ ಶಾ ಅವರಿದ್ದ ವಾಹನದ ಎದುರೇ ಬೈಕ್ ಚಲಾಯಿಸಿ ಸಂಚಾರಕ್ಕೆ ಅಡ್ಡಿ ಪಡಿಸಿದ್ದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
‘ಭದ್ರತಾ ಲೋಪವಾಗಿಲ್ಲ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಡಿಎಲ್ ಇರಲಿಲ್ಲ. ಭದ್ರತಾ ಕಾರ್ಯಕ್ಕೆ ನಿಯೋಜನೆ ಗೊಂಡಿದ್ದ ಪೊಲೀಸರನ್ನು ಗಮನಿಸಿದ ವಿದ್ಯಾರ್ಥಿಗಳು ಭಯದಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಬೈಕ್ ಚಲಾಯಿಸಿದರು. ಅದೇ ವೇಳೆಗೆ ಗೃಹ ಸಚಿವರ ಕಾರು ಬಂತು. ಮತ್ತಷ್ಟು ಭಯದಿಂದ ಬೈಕ್ ಓಡಿಸಿದರು. ನಿರ್ಲಕ್ಷ್ಯ ತೋರಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.