ಕೆಂಗೇರಿ: ರಾಜೀವ್ ಗಾಂಧಿ ವಸತಿ ಯೋಜನೆಯಡಿ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಚಿಕ್ಕೆಲ್ಲೂರು ಗ್ರಾಮದಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕರ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
₹53.47 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಸತಿ ಸಮುಚ್ಚಯ 14 ಅಂತಸ್ತುಗಳಿದ್ದು, 516 ಫ್ಲಾಟ್‌ಗಳಿವೆ.
ಪರಿಶೀಲನೆ ನಡೆಸಿ ಮಾತನಾಡಿದ ಸಚಿವ ಜಮೀರ್ ಅಹಮದ್, ಸಾಮಾನ್ಯ ವರ್ಗದವರಿಗೆ ₹8.5 ಲಕ್ಷ ಹಾಗೂ ಎಸ್.ಸಿ, ಎಸ್.ಟಿ ಪಂಗಡದವರಿಗೆ ₹7.7 ಲಕ್ಷ ದರದಲ್ಲಿ ಫ್ಲ್ಯಾಟ್ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಶೀಘ್ರದಲ್ಲೇ ಫಲಾನುಭವಿಗಳಿಗೆ ಫ್ಲ್ಯಾಟ್ ಹಂಚಿಕೆ ಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು‘ ಎಂದರು.
‘ಫ್ಲ್ಯಾಟ್‌ನ ಸಂಪೂರ್ಣ ಹಣ ಭರಿಸಲು ಸಾಧ್ಯವಾಗದ ಅರ್ಜಿದಾರರಿಗೆ ಕೆಲ ಬ್ಯಾಂಕ್ ಮುಖಾಂತರ ಸಾಲ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದ ಬಡವರು, ಕೂಲಿ ಕಾರ್ಮಿಕರು ಈ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಸಚಿವರ ತರಾಟೆ: ಕಳಪೆ ಗುಣಮಟ್ಟದ ಕಿಟಕಿ, ಬಾಗಿಲುಗಳನ್ನು ಮನೆಗಳಿಗೆ ಅಳವಡಿಸಿದ್ದನ್ನು ಗಮನಿಸಿದ ಸಚಿವ ಜಮೀರ್ ಅಹಮದ್, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಉತ್ತಮ ಗುಣಮಟ್ಟದ ಕಿಟಕಿ, ಬಾಗಿಲುಗಳನ್ನು ಮರು ಅಳವಡಿಸುವಂತೆ ಸೂಚಿಸಿದರು.
ಇದೇ ವೇಳೆ ಕೆಂಗೇರಿ ಉಪನಗರದಲ್ಲಿನ ಕೆ.ಎಚ್.ಬಿ ಪ್ಲಾಟಿನಂಗೆ ಶಾಸಕ ಸೋಮಶೇಖರ್ ಅವರೊಂದಿಗೆ ಭೇಟಿ ನೀಡಿದ ಸಚಿವರು ಸಮುಚ್ಚಯದ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು.
ಕೆ.ಎಚ್.ಬಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ, ಮುಖಂಡರಾದ ಡಿ.ಹನುಮಂತಯ್ಯ, ವೇಣುಗೋಪಾಲ್, ಚೇತನ್, ಪ್ರಸನ್ನ, ರೇವಣಸಿದ್ದಯ್ಯ, ಕೆ.ಎಚ್.ಬಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.