ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಭಾಷೆಗಳ ಕಲಿಕೆಗೆ ಇಲ್ಲ ಆಸಕ್ತಿ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ 11 ಭಾಷೆಗಳ ಕಲಿಕೆಗೆ ಅವಕಾಶ
Last Updated 5 ಜುಲೈ 2019, 19:52 IST
ಅಕ್ಷರ ಗಾತ್ರ

‌ಬೆಂಗಳೂರು: ಹಲವು ಭಾಷೆಗಳನ್ನು ಕಲಿತರೆ ಎಂತಹ ಅದ್ಭುತ ಅವಕಾಶದ ಲೋಕವೇ ತೆರೆದುಕೊಳ್ಳುತ್ತದೆ ಎಂದು ಬಿಂಬಿಸುವ ವ್ಯವಸ್ಥೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿದ್ದರೂ, ಅದನ್ನು ಬಳಸಿಕೊಳ್ಳುವವರ ಸಂಖ್ಯೆ ಇನ್ನೂ ಬೆರಳೆಣಿಕೆಯಲ್ಲೇ ಇದೆ.

ಫ್ರೆಂಚ್‌, ಜರ್ಮನ್‌, ಜಪಾನೀಸ್‌, ಚೈನೀಸ್‌ ಸಹಿತ 11 ಭಾಷೆಗಳನ್ನು ಅಗ್ಗದ ದರದಲ್ಲಿ ಕಲಿಸುವ ದಕ್ಷಿಣ ಭಾರತದ ಏಕೈಕ ಕೇಂದ್ರವೇ ಇಲ್ಲಿನ ಜಾಗತಿಕ ಭಾಷಾ ಕೇಂದ್ರ (ಗ್ಲೋಬಲ್‌ ಲ್ಯಾಂಗ್ವೇಜ್‌ ಸೆಂಟರ್‌).

1985ರಲ್ಲಿ ಫ್ರೆಂಚ್‌ ಭಾಷೆಯನ್ನು ಕಲಿಸುವುದರೊಂದಿಗೆ ಇಲ್ಲಿ ಜಾಗತಿಕ ಭಾಷಾ ಕೇಂದ್ರ ಆರಂಭವಾಯಿತು. ಅಂದು ಇಲ್ಲಿ ವಿದ್ಯಾರ್ಥಿಯಾಗಿದ್ದ ಡಾ.ಜ್ಯೋತಿ ವೆಂಕಟೇಶ್‌ ಅವರೇ ಈ ಕೇಂದ್ರದ ಸಮನ್ವಯಕಾರರು. 4 ತಿಂಗಳ ಬೇಸಿಕ್‌ ಕೋರ್ಸ್‌ಗೆ ಇಲ್ಲಿ ಶುಲ್ಕ ₹ 8,300. ತಲಾ 4 ತಿಂಗಳ ಸರ್ಟಿಫಿಕೇಟ್‌ 1, 2,ಡಿಪ್ಲೊಮಾ 1,2 ಕೋರ್ಸ್‌ಗಳ ಜತೆಗೆ ತಲಾ 8 ತಿಂಗಳ ಹೈಯರ್ ಡಿಪ್ಲೊಮಾ ಮತ್ತು ಅಡ್ವಾನ್ಸ್‌ಡ್‌ ಡಿಪ್ಲೊಮಾ ಕೋರ್ಸ್‌ಗಳೂ ಇಲ್ಲಿವೆ. ವಾರಕ್ಕೆ ಒಟ್ಟು ಆರು ಗಂಟೆಯ ಪಾಠ ಇಲ್ಲಿ ಅತಿಥಿ ಉಪನ್ಯಾಸಕರಿಂದ ನಡೆಯುತ್ತದೆ. ಉದ್ಯೋಗಿಗಳಿಗೆ,ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ವೇಳಾಪಟ್ಟಿಯೇ ಇದೆ.ಇಲ್ಲಿ ದೊರೆಯುವ ಪ್ರಮಾಣಪತ್ರಕ್ಕೆ ಜಾಗತಿಕ ಮನ್ನಣೆ ಇದೆ.

ಭಾಷೆ ಏಕೆ ಬೇಕು?: ‘ಜರ್ಮನಿ, ಜಪಾನ್‌, ಫ್ರಾನ್ಸ್‌, ಕೊರಿಯಾ, ಚೀನಾ ಸಹಿತ ಹಲವಾರು ದೇಶಗಳಿಗೆ ಉದ್ಯೋಗಕ್ಕೆ, ಉನ್ನತ ವ್ಯಾಸಂಗಕ್ಕೆ ಹೋಗುವಾಗ ಇಂಗ್ಲಿಷ್‌ ಜತೆಗೆ ಆಯಾ ದೇಶದ ಭಾಷೆಯನ್ನು ಕಲಿತರೆ ತುಂಬಾ ಅನುಕೂಲ. ಕೆನಡಾದಲ್ಲೂ ಫ್ರೆಂಚ್‌ ಭಾಷೆಗೆ ಭಾರಿ ಬೇಡಿಕೆ ಇದೆ. ಅದನ್ನುದೃಷ್ಟಿಯಲ್ಲಿ ಇಟ್ಟುಕೊಂಡು ಪದವಿ ಕಲಿಯುವ ಹಂತದಲ್ಲೇ ಹಲವರು ಜಾಗತಿಕ ಭಾಷೆಗಳಲ್ಲಿ ಕೆಲವನ್ನು ಕರಗತ ಮಾಡಿಕೊಂಡಿರುತ್ತಾರೆ. ನಗರದ ಹೃದಯ ಭಾಗದಲ್ಲೇ ಇಂತಹ ಕಲಿಕಾ ಸೌಲಭ್ಯ ಇದ್ದರೂ ಅದನ್ನು ಬಳಸಿಕೊಳ್ಳುವವರು ಕಡಿಮೆ’ ಎನ್ನುತ್ತಾರೆ ಡಾ.ಜ್ಯೋತಿ ವೆಂಕಟೇಶ್‌.

‘ಇಲ್ಲಿಗೆ ಅನೇಕ ಕಂಪನಿಗಳು ಬಂದು, ವಿವಿಧ ಭಾಷೆ ಕಲಿತವರ ಬಗ್ಗೆ ವಿಚಾರಿಸುತ್ತವೆ. ಅವರ ಆಸಕ್ತಿ ನೋಡಿದಾಗ ಯುವಜನತೆ ಭಾಷೆ ಕಲಿತರೆ ಅದೆಷ್ಟು ಉತ್ತಮ ಅವಕಾಶ ಗಿಟ್ಟಿಸಬಹುದು ಎಂಬ ಭಾವನೆ ಮೂಡದೇ ಇಲ್ಲ. ಅದನ್ನು ತಿಳಿಸುವ ಪ್ರಯತ್ನವನ್ನು ಪೋಷಕರು ಮಕ್ಕಳಿಗೆ ಮಾಡಬೇಕು. ಇಂದಲ್ಲ ನಾಳೆಯಾದರೂ ಇದರ ಬಗ್ಗೆ ಗಮನ ಹರಿಸುವ ವಿಶ್ವಾಸ ಇದೆ’ ಎಂದು ಅವರು ಹೇಳುತ್ತಾರೆ.

ಅನುಕೂಲತೆ: ಪದವಿ ಹಂತದಲ್ಲಿ ಆರೂ ಹಂತದ ಭಾಷಾ ಕಲಿಕೆ ಪೂರೈಸಿದ್ದೇ ಆದರೆ ಸ್ನಾತಕೋತ್ತರ ಪದವಿಯಲ್ಲಿ ತಾವು ಕಲಿತ ಭಾಷೆಯಲ್ಲೇ ಸ್ನಾತಕೋತ್ತರ ಪದವಿಯನ್ನು ಪಡೆಯುವ ಅವಕಾಶ ಇಲ್ಲಿ ಇದೆ. ಅಂದರೆ ಪದವಿ ಹಂತದಲ್ಲಿ ವಾಣಿಜ್ಯ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ಫ್ರೆಂಚ್‌, ಜರ್ಮನ್‌, ಸ್ಪಾನಿಷ್‌ ಅಥವಾ ಜಪಾನೀಸ್‌ ಭಾಷೆಯಲ್ಲಿ ಎಂ.ಎ.ವ್ಯಾಸಂಗ ಮಾಡಬಹುದು. ಫ್ರೆಂಚ್‌ ಭಾಷೆಯಲ್ಲಿ ಪಿಎಚ್‌.ಡಿ.ಯನ್ನೂ ಇಲ್ಲಿ ಪಡೆಯಬಹುದು.ಸ್ನಾತಕೋತ್ತರ ಪದವಿ ಬೇಡ ಎಂದಾದರೆ ತಮ್ಮ ಇಷ್ಟದ ಭಾಷೆಯನ್ನು ಬಳಸಿಕೊಂಡು ಆಯಾ ದೇಶಗಳಿಗೆ ಆತ್ಮವಿಶ್ವಾಸದಿಂದ ತೆರಳಿ ತಾವು ಕಲಿತ ವಿದ್ಯೆಯ ಆಧಾರದಲ್ಲಿ ಅಲ್ಲಿ ಸಮರ್ಥವಾಗಿ ಕೆಲಸ ಮಾಡಬಹುದು.

ಸಾಮಾನ್ಯವಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಜರ್ಮನ್‌ ಭಾಷೆ ಕಲಿತರೆಉತ್ತಮ, ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಕಲಿತವರು ಇಟಾಲಿಯನ್‌ ಭಾಷೆ ಕಲಿತರೆ ಅನುಕೂಲ. ಜಪಾನ್‌, ಕೊರಿಯಾ, ಚೀನಾಗಳಲ್ಲಿ ಆಯಾ ದೇಶದ ಭಾಷೆ ಬಂದರಷ್ಟೇ ಕೆಲಸ ಮಾಡಲು ಸುಲಭ ಎಂಬುದನ್ನು ಈಗಾಗಲೇ ಅಲ್ಲಿಗೆ ಹೋಗಿ ಬಂದವರು ತಿಳಿಸುತ್ತಾರೆ.

ಫ್ರೆಂಚ್‌, ಜರ್ಮನ್‌ಗೆ ಬೇಡಿಕೆ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌, ಜಪಾನೀಸ್‌, ಚೈನೀಸ್‌ ಭಾಷೆಗಳಿಗೆ ಬಹಳ ಬೇಡಿಕೆ ಇದೆ. ಪೋರ್ಚುಗೀಸ್‌, ಕೊರಿಯನ್‌, ಇಟಲಿ ಭಾಷೆಗಳಿಗೆ ನಂತರದ ಸ್ಥಾನ ಇದೆ. ಅರಬ್ಬಿ, ಫಿನ್ನಿಷ್‌, ರಷ್ಯನ್‌ ಭಾಷೆಗಳಿಗೆ ಅಂತಹ ಬೇಡಿಕೆ ಇಲ್ಲ.

ಇಲ್ಲಿನ ಕಟ್ಟಡ ಮಾತ್ರ ಶಿಥಿಲಾವಸ್ಥೆಯಲ್ಲಿದೆ. ‘ವಿಶ್ವವಿದ್ಯಾಲಯ ವಿಭಜನೆಯಾದ ಬಳಿಕ ವಿವಿಧ ವಿಭಾಗಗಳಿಗೆ ಸ್ಥಳಾವಕಾಶ ಒದಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಕೊಠಡಿಗಳನ್ನು ಒದಗಿಸಲಾಗುವುದು’ ಎಂದು ಕುಲಪತಿ ಡಾ.ಎಸ್‌.ಜಾಫೆಟ್‌ ಭರವಸೆ ನೀಡಿದರು.

ಹೊಸ ಬ್ಯಾಚ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಇದೀಗ ಅರ್ಜಿ ಆಹ್ವಾನಿಸಲಾಗಿದೆ.ಮಾಹಿತಿಗೆ ಸಂಪರ್ಕಿಸಿ 080–22961280, 9845489267

*
ನಗರದ ಹೃದಯ ಭಾಗದಲ್ಲಿ ಅಗ್ಗದ ಶುಲ್ಕದೊಂದಿಗೆ ವಿವಿಧ ಭಾಷೆ ಕಲಿಸುವ ಕೇಂದ್ರ ಇದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಇದನ್ನು ಬಳಸಿಕೊಳ್ಳಬೇಕು.
-ಡಾ.ಜ್ಯೋತಿ ವೆಂಕಟೇಶ್‌, ಜಾಗತಿಕ ಭಾಷಾ ಕೇಂದ್ರದ ಸಮನ್ವಯಕಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT