ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ದಿನಗಳಲ್ಲಿ 1,592 ಪ್ರಕರಣಗಳ ವಿಚಾರಣೆ ನಡೆಸಿದ್ದ ಎ.ಸಿ

ಸರ್ಕಾರಿ ಜಮೀನಿಗೆ ಅಕ್ರಮ ಖಾತೆ ಮಾಡಿಕೊಟ್ಟ ಪ್ರಕರಣ
Last Updated 26 ಜುಲೈ 2020, 21:16 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟ ಆರೋಪ ಎದುರಿಸುತ್ತಿರುವ, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಯಾಗಿದ್ದ ಕೆ.ರಂಗನಾಥ ಅವರು 2020ರ ಮೇ 15ರಿಂದ ಜೂನ್‌ 26ರ ನಡುವೆ ಭೂವ್ಯಾಜ್ಯಕ್ಕೆ ಸಂಬಂಧಿಸಿದ ಒಟ್ಟು 1,592 ಮೇಲ್ಮನವಿ (ಆರ್‌.ಎ) ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.

ರಂಗನಾಥ್‌ ಅವರು ಮೇ 15ರಿಂದ ಜುಲೈ 26ರ ನಡುವೆ ನಿತ್ಯ ಸರಾಸರಿ 39 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಈ ಅವಧಿಯಲ್ಲಿ 188 ಪ್ರಕರಣಗಳನ್ನು ಆದೇಶಕ್ಕೆ ಕಾಯ್ದಿರಿಸಿದ್ದಾರೆ. ಒಟ್ಟು ಏಳು ದಿನಗಳಲ್ಲಿ 100ಕ್ಕೂ ಅಧಿಕ ಪ್ರಕರಣಗಳ ವಿಚಾರಣೆಗಳನ್ನು ನಡೆಸಿದ್ದಾರೆ. ಈ ವೇಳೆ ಅನೇಕ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್ ಪ್ರಸಾದ್‌ ಅವರು ಜುಲೈ 26ರಂದು ಉತ್ತರ ಉಪವಿಭಾಗಾಧಿಕಾರಿ ಕಚೇರಿಯ ಕಡತಗಳನ್ನು ಪರಿಶೀಲಿಸಿದ್ದರು. ಅನೇಕ ಅಕ್ರಮಗಳು ನಡೆದಿರುವುದು ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಸಾಬೀತಾಗಿವೆ. ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿಯನ್ನೂ ಸಲ್ಲಿಸಿದ್ದಾರೆ.

ರಂಗನಾಥ್‌ 2020ರ ಮಾರ್ಚ್‌ 26ರಿಂದ ಜುಲೈ 26ರ ವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಮಾ.24ರಿಂದ ಮೇ 3ರ ನಡುವೆ ಲಾಕ್‌ಡೌನ್‌ ಜಾರಿಯಲ್ಲಿತ್ತು. ಇನ್ನುಳಿದ ದಿನಗಳಲ್ಲಿ ಕಂದಾಯ ಮೇಲ್ಮನವಿ (ಆರ್‌.ಎ) ಪ್ರಕರಣಗಳಿಗೆ ಸಂಬಂಧಿಸಿ ಅಕ್ರಮ ನಡೆಸಿರುವ ಆರೋಪ ಅವರ ಮೇಲಿದೆ.

ರಂಗನಾಥ್‌ ಅವರ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಕೆಲವು ಉದಾಹರಣೆಗಳು ಇಂತಿವೆ. ಯಶವಂತಪುರ ಹೋಬಳಿಯ ಕನ್ನಲ್ಲಿ ಗ್ರಾಮದ ಸರ್ವೆ ನಂಬರ್‌ 93ರಲ್ಲಿ 2 ಎಕರೆ ಜಮೀನಿನ ಕರ್ನಾಟಕ ಭೂಕಂದಾಯ ಕಾಯ್ದೆಯ 1964ರ ಕಲಂ 16 (20ರ ಪ್ರಕರಣದ ಮೇಲ್ಮನವಿ) 2017ರ ಜುಲೈ 7ರಂದು ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆದು ಪ್ರಕರಣದ ಆದೇಶವನ್ನು 2019ರ ಜು 31ಕ್ಕೆ ಕಾಯ್ದಿರಿಸಲಾಗಿತ್ತು. ಈ ಪ್ರಕರಣವನ್ನು 2020ರ ಜೂನ್‌ 2ರಂದು ಮರುವಿಚಾರಣೆಗೆ ದಿನಾಂಕ ನಿಗದಿಪಡಿಸಿ ಜೂನ್‌ 23ರಂದು ಸರ್ಕಾರಿ ಜಮೀನನ್ನು ಖಾಸಗಿಯವರ ಹೆಸರಿಗೆ ಖಾತೆ ಮಾಡಿ ಆದೇಶವನ್ನೂ ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ದಾಖಲೆಗಳ ಮರುಪರಿಶೀಲನೆಗೆ ತಹಶೀಲ್ದಾರ್‌ಗೆ ಸೂಚಿಸದೆಯೇ ಆದೇಶ ಹೊರಡಿಸಲಾಗಿದೆ.

ನಾಲ್ಕೇ ದಿನದಲ್ಲಿ 3 ಹೆಕ್ಟೇರ್‌ ಮಂಜೂರು:

ಯಲಹಂಕ ತಾಲ್ಲೂಕಿನ ಸಾತನೂರು ಗ್ರಾಮದ ಸರ್ವೇನಂಬರ್‌ 67/1ಎಪಿ1 ಹಾಗೂ ಹೊಸ ಸರ್ವೆ ನಂಬರ್‌ 127ರಲ್ಲಿ 3 ಹೆಕ್ಟೇರ್‌ 96 ಏರ್ಸ್‌ (10ಎಕರೆ) ಜಮೀನಿನ ಖಾತೆ ಸಂಬಂಧ ಇದೇ ಜೂನ್‌5ರಂದು ಮೇಲ್ಮನವಿ ಸಲ್ಲಿಕೆಯಾಗಿದೆ. ಅದರ ಮರುದಿನವೇ ಪ್ರಕರಣದ ವಿಚಾರಣೆ ನಡೆಸಿ ಜೂನ್‌ 9ರಂದು ಖಾಸಗಿಯವರ ಹೆಸರಿ ಖಾತೆ ಮಾಡಿಸಲು ಆದೇಶ ಪ್ರಕಟಿಸಲಾಗಿದೆ. ಭೂ ಮಂಜೂರಾತಿಗೆ ಸಂಬಂಧಿಸಿದ ಯಾವುದೇ ದೃಢೀಕೃತ ದಾಖಲೆಗಳನ್ನು ಪರಿಶೀಲಿಸದೆಯೇ ಕೆ.ರಂಗನಾಥ್‌ ನಾಲ್ಕು ದಿನಗಳಲ್ಲೇ ಆದೇಶ ಪ್ರಕಟಿಸಿದ್ದಾರೆ.

ಎಂಟು ಎಕರೆಗೆ ಹತ್ತೇ ದಿನಗಳಲ್ಲಿ ಖಾತೆ:

ಯಶವಂತಪುರ ಹೋಬಳಿಯ ಕೊಡಿಗೆಹಳ್ಳಿ ಗ್ರಾಮದ ಸರ್ವೆ ನಂಬರ್‌ 148 ಮತ್ತು 151ರ ಜಮೀನಿಗೆ ಸಂಬಂಧಿಸಿದಂತೆ ಜೂನ್‌ 8ರಂದು ಮೇಲ್ಮನವಿ ಪ್ರಕರಣ ದಾಖಲಾಗಿದೆ. ಜೂನ್‌ 10ರಂದು ಮೊದಲ ವಿಚಾರಣೆ ನಡೆಸಿದ್ದ ರಂಗನಾಥ್‌ ಅವರು ಬಿ.ಎಸ್‌.ವೆಂಕಟೇಶ್‌ ಹೆಸರಿಗೆ ಸರ್ವೆ ನಂಬರ್‌ 148ರಲ್ಲಿ 4 ಎಕರೆ ಹಾಗೂ 151ರಲ್ಲಿ 4 ಎಕರೆಗೆ ಖಾತೆ ಮಾಡಲು ಜೂನ್‌ 18ರಂದು ಆದೇಶವನ್ನೂ ಮಾಡಿದ್ದಾರೆ. ಅವರಿಗೆ ಜಮೀನು ಮಂಜೂರಾದ ಯಾವುದೇ ದೃಢೀಕೃತ ದಾಖಲೆಗಳು ಲಭ್ಯವಿಲ್ಲ. ಸಾಗುವಳಿ ಚೀಟಿಯ ಜೆರಾಕ್ಸ್‌ ಪ್ರತಿ, ಮ್ಯುಟೇಷನ್‌ ಮತ್ತು ಕೆಲವು ಕೈಬರಹದ ಪಹಣಿಗಳ ಜೆರಾಕ್ಸ್‌ಗಳೆಲ್ಲವೂ ಸೃಷ್ಟಿತ ದಾಖಲೆಗಳಂತೆ ಕಂಡು ಬರುತ್ತಿವೆ. ಭೂಗಳ್ಳರಿಗೆ ನೆರವಾಗುವ ಹಾಗೂ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಆದೇಶ ಹೊರಡಿಸಿದಂತಿದೆ ಎಂದು ಪ್ರಧಾನ ಕಾರ್ಯದರ್ಶಿ ಅವರು ವರದಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT