ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ವಿರುದ್ಧ ಗೌಡರ ಗುಡುಗು

ಜೆಡಿಎಸ್‌ ವಿಕಾಸ ಪರ್ವ ಸಮಾವೇಶ: ಹರಿದು ಬಂತು ಜನಸಾಗರ
Last Updated 26 ಮಾರ್ಚ್ 2018, 7:38 IST
ಅಕ್ಷರ ಗಾತ್ರ

ಮಾಗಡಿ: ಕನಿಷ್ಠ 113 ಸ್ಥಾನದೊಂದಿಗೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ. ಅದನ್ನು ರಾಜ್ಯದ ಆರೂವರೆ ಕೋಟಿ ಜನತೆ ನಿರ್ಧರಿಸ
ಬೇಕೇ ಹೊರತು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕಿಡಿಕಾರಿದರು.

ಇಲ್ಲಿನ ಕೋಟೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್‌ನ ವಿಕಾಸಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಸದ್ಯ ಹೋದಲ್ಲೆಲ್ಲ ದೇವೇಗೌಡರ ಮಕ್ಕಳನ್ನು ನಾಶ ಮಾಡುವ ಮಾತುಗಳನ್ನಾಡುತ್ತಿದ್ದಾರೆ. ಅದು ಅವರ ಹತಾಶೆ, ವಿಕೃತಿಯ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಅತಿರೇಕದ ಮಾತುಗಳನ್ನು ಆಡುವ ಮೊದಲು ಇವತ್ತು ದೇಶದಲ್ಲಿ ಕಾಂಗ್ರೆಸ್ ಯಾವ ಪರಿಸ್ಥಿತಿಯಲ್ಲಿ ಇದೆ ಎಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅರಿತುಕೊಳ್ಳಬೇಕು. ಕರ್ನಾಟಕ ಹೊರತುಪಡಿಸಿ ಉಳಿದೆಲ್ಲ ಕಡೆ ಆ ಪಕ್ಷ ದೂಳೀಪಟವಾಗಿದೆ. ಹೀಗಾಗಿಯೇ ಅವರು ಇಂದು ಚಂದ್ರಬಾಬು ನಾಯ್ದು ಅಂತಹವರ ಮನೆಯ ಬಾಗಿಲಿಗೆ ಹೋಗಿ ನಿಂತಿದ್ದಾರೆ ಎಂದು ಲೇವಡಿ ಮಾಡಿದರು.

ಇನ್ನೊಬ್ಬರು ಕಳುಹಿಸಿದ ಚೀಟಿ ಹಿಡಿದು ಮಾತನಾಡುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎಂದು ಲೇವಡಿ ಮಾಡಿದರು.

‘ಸೋನಿಯಾ ಗಾಂಧಿ ಒಂದೆಡೆ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಹುಲ್‌ರ ಈ ಮಾತುಗಳು ನಿರಾಸೆ ಹುಟ್ಟಿಸುತ್ತಿವೆ. ಅವರು ಆರೋಪಿಸಿದಂತೆ ಯಾವ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ. ನಾವೆಂದೂ ಮುಸಲ್ಮಾನರಿಗೆ ದ್ರೋಹ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ಸೇರಿಸಿಕೊಂಡಾಗಿನಿಂದಲೇ ಕಾಂಗ್ರೆಸ್ ಅವನತಿ ಆರಂಭವಾಗಿದೆ ಎಂದರು ಟೀಕಿಸಿದರು.

ಫಾರೂಕ್‌ರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿ ಮಾಡಿದ್ದೆವು. ಆದರೆ ಅವರು ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನ ಸೋಲಿಸಿದರು. ಇಂತಹವರಿಗೆ ಜಾತ್ಯತೀತತೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ಅವರಿಗೆ ದೈವ ಬಲ ಇದೆ. ರಾಜ್ಯದಲ್ಲಿ ಬಿಜೆಪಿಯ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಬಹುಶಃ ಇದು ನನ್ನ ಕೊನೆಯ ರಾಜಕೀಯ ಹೋರಾಟ. ಈ ಹೋರಾಟದಲ್ಲಿ ನಿಮ್ಮನ್ನು ಮಣಿಸುತ್ತೇನೆ’ ಎಂದು ಗುಡುಗಿದರು.

ನಮ್ಮದೇ ಎ ಟೀಮ್‌: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಯಾವಾಗಲೂ ಮೋದಿ ನೋಡಿ ಓಟು ಹಾಕಿ ಎನ್ನುತ್ತಾರೆ. ಯಡಿಯೂರಪ್ಪ ಅವರನ್ನು ನೋಡಿ ಓಟು ಹಾಕಿ ಎನ್ನಲು ಅವರಿಗೆ ಧೈರ್ಯವಿಲ್ಲವೇ’ ಎಂದು ಪ್ರಶ್ನಿಸಿದರು.

‘ನಮ್ಮದು ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷವೇ ನಮ್ಮ ಬಿ ಟೀಮ್‌. ನಮ್ಮ ಗರಡಿಯಲ್ಲಿ ಪಳಗಿದವರೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಅನ್ನು ಮುಳುಗಿಸಿದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಸಹಿತ ಎಲ್ಲರಿಗೂ ಗೊತ್ತಿದೆ. ಅಲ್ಲಿ ಮೂಲ ಕಾರ್ಯಕರ್ತರಿಗಿಂತ ವಲಸಿಗರೇ ಮೆರೆಯುತ್ತಿದ್ದಾರೆ. ಈ ಬಗ್ಗೆ ಮುಖಂಡರೇ ಸೋನಿಯಾ ಗಾಂಧಿ ಬಳಿ ಅಳಲು ತೋಡಿಕೊಂಡಿದ್ದಾರೆ’ ಎಂದು ಲೇವಡಿ ಮಾಡಿದರು.

‘ಇಲ್ಲಿನ ಶಾಸಕರು ಬೇಕಾದಷ್ಟು ಹಣ ಮಾಡಿಕೊಂಡಿದ್ದಾರೆ. ದುಡ್ಡು ಬಿಸಾಕಿ ಓಟು ತೆಗೆದುಕೊಳ್ಳಬಹುದು ಎಂದು ಅವರೇ ಹಿಂದೊಮ್ಮೆ ನನಗೆ ಪಾಠ ಹೇಳಿದ್ದರು. ಇಂತಹವರಿಗೆ ಜನ ಪಾಠ ಕಲಿಸಬೇಕು’ ಎಂದರು.

‘ನಮ್ಮದೇ ರೇಷ್ಮೆ ಬಳಸಿ ಬ್ಯಾಂಕಾಕ್‌ನಲ್ಲಿ 30 ಬಗೆಯ ಉಪ ಉತ್ಪನ್ನಗಳನ್ನು ಸಿದ್ಧಪಡಿಸಬಹುದು. ಮುಂದೆ ಅಧಿಕಾರಕ್ಕೆ ಬಂದ ಸಂದರ್ಭ ಇಂತಹ ಹತ್ತಾರು ಜನೋಪಯೋಗಿ ಆವಿಷ್ಕಾರಗಳ ಕನಸು ಹೊಂದಿದ್ದೇನೆ. ಮಾಗಡಿಯಲ್ಲಿ ಕೌಶಲ ತರಬೇತಿ ವಿಶ್ವವಿದ್ಯಾಲಯ ಸ್ಥಾಪನೆಯ ಕನಸನ್ನು ಮುಂದೆ ಈಡೇರಿಸಿ ಉದ್ಯೋಗ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.

ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯಾ ಮಾತನಾಡಿ, ಕಾಂಗ್ರೆಸ್‌ ರಾಜ್ಯದಲ್ಲಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಅಂತಹವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹೇಶ್‌ ಮಾತನಾಡಿ, ಬಿಎಸ್ಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದೆಡೆ ಜೆಡಿಎಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದರು.

ಪಕ್ಷದ ಮುಖಂಡ ಎಚ್. ವಿಶ್ವನಾಥ್, ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯರಾದ ಶರವಣ, ಕಾಂತರಾಜು, ರಾಜ್ಯಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಪಾರೂಕ್, ಮುಖಂಡರಾದ ಶಿವರಾಮೇಗೌಡ, ಪಟೇಲ್‌ ಶಿವರಾಮಯ್ಯ, ಬಿ.ಬಿ. ನಿಂಗಯ್ಯ, ಎ.ಬಿ. ಖಾನ್ , ಅಪ್ಪಾಜಿಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುನಾಥ್‌, ಚಂದ್ರಮ್ಮ, ನಂಜಯ್ಯ, ಬಿಡದಿ ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮ, ಸ್ಥಳೀಯ ಮುಖಂಡರಾದ ನಾಜಿಯಾ ಜವಾಹರ್‌, ಗಿರಿಯಪ್ಪ, ವೀರಪ್ಪ, ಪಿ.ವಿ. ಸೀತಾರಾಮು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

**

ಜೇಡರಹಳ್ಳಿ ಕೃಷ್ಣಪ್ಪ ಸೇರ್ಪಡೆ

ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ ಕಾರ್ಯಕ್ರಮದಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ಸೇರಿದರು.

ಜನಸಾಗರ: ಮಾಗಡಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಧಾವಿಸಿದ್ದರು.

ರಾಮನಗರ ತಾಲ್ಲೂಕಿನ ಕೂಟಗಲ್‌, ಬಿಡದಿ ಹೋಬಳಿಗಳಿಂದಲೂ ಸಾಕಷ್ಟು ಕಾರ್ಯಕರ್ತರು, ಅಭಿಮಾನಿಗಳು ಬಂದಿದ್ದರು.

**

ಮಂಜು ಕಣ್ಣೀರು

‘ಕ್ಷೇತ್ರದ ಜನತೆ ಈ ಬಾರಿಯ ಚುನಾವಣೆಯಲ್ಲಿ ನನಗೆ ಒಂದು ಅವಕಾಶ ಕೊಡಬೇಕು’ ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಕಣ್ಣೀರು ಹಾಕುತ್ತಲೇ ಮನವಿ ಮಾಡಿದರು.

‘ಹಾಲಿ ಶಾಸಕರು ದೌರ್ಜನ್ಯ, ದರ್ಪದಿಂದ ನಡೆದುಕೊಂಡು, ಜೆಡಿಎಸ್‌ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್ ಸೇರಿ ಮಂತ್ರಿ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಅವರ ಸಾವಿರ ವಾಟ್‌ ಪವರ್‌ ಫ್ಯೂಸ್‌ ಅನ್ನು ಇಂದಿಗೆ ಕಿತ್ತಿದ್ದೇವೆ’ ಎಂದು ನುಡಿದರು.

**

ಜೆಡಿಎಸ್ ತೊರೆದಿರುವ ಶಾಸಕರ ಬಗ್ಗೆ ಮಾತನಾಡುವುದು ಕೊಚ್ಚೆ ಮೇಲೆ ಕಲ್ಲೆಸೆದಂತೆ. ಈಗ ಆ ಕೆಸರೆಲ್ಲ ತೊಲಗಿ ಪಕ್ಷ ಪರಿಶುದ್ಧವಾಗಿದೆ.

-ಎಚ್‌.ಡಿ. ಕುಮಾರಸ್ವಾಮಿ, ಅಧ್ಯಕ್ಷ ಜೆಡಿಎಸ್ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT