ಸೋಮವಾರ, ಸೆಪ್ಟೆಂಬರ್ 16, 2019
27 °C
ಭದ್ರೆಗೆ ಬಾಗಿನ ಅರ್ಪಿಸಿದ ಸಂಸದ

ಪ್ರವಾಸಿ ತಾಣಗಳಾಗಿ ಪ್ರಮುಖ ಜಲಾಶಯಗಳು: ಬಿ.ವೈ.ರಾಘವೇಂದ್ರ

Published:
Updated:
Prajavani

ಶಿವಮೊಗ್ಗ: ಭದ್ರಾ ಸೇರಿದಂತೆ ಜಿಲ್ಲೆಯ ಪ್ರಮುಖ ಜಲಾಶಯಗಳ ಬಳಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭದ್ರಾ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಶಿವಮೊಗ್ಗ ಜಿಲ್ಲೆ ಪ್ರಮುಖ ಪ್ರವಾಸ ಕೇಂದ್ರವನ್ನಾಗಿ ರೂಪುಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಅಗತ್ಯ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಾರಿ ಎಲ್ಲೆಡೆ ಉತ್ತಮ ಮಳೆಯಾಗಿದೆ. ಕೆಲವು ಭಾಗಗಳಲ್ಲಿ ಅತಿವೃಷ್ಟಿ, ಮತ್ತೊಂದು ಭಾಗದಲ್ಲಿ ಅನಾವೃಷ್ಟಿ ಪರಿಸ್ಥಿತಿ ಇದೆ. ಭದ್ರಾ ಜಲಾಶಯ ಭರ್ತಿಯಾಗಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಹರ್ಷ ಮೂಡಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ 1.82 ಲಕ್ಷ ಹೆಕ್ಟೇರ್‌ ಭೂಮಿಗೆ ಈ ಜಲಾಶಯ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಹಲವು ಜಿಲ್ಲೆಗಳ ಕುಡಿಯುವ ನೀರಿಗೂ ಭದ್ರಾ ನೀರು ಬಳಸಲಾಗುತ್ತದೆ ಎಂದರು.

ಭದ್ರಾವತಿಯಲ್ಲಿ ರ್‍ಯಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಘಟಕ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಕೇಂದ್ರದಿಂದ ₨ 200 ಕೋಟಿ ಅನುದಾನ ಬಿಡುಗಡೆಯಾಗಿದೆ. ಒಂದು ತಿಂಗಳ ಒಳಗೆ ಕಾಮಗಾರಿ ಆರಂಭವಾಗಲಿದೆ ಎಂದು ವಿವರ ನೀಡಿದರು.

ವಿಮಾನ ನಿಲ್ದಾಣ ಕಾಮಗಾರಿಯೂ ಶೀಘ್ರ ಆರಂಭವಾಗಲಿದೆ. ಎಲ್ಲ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಿದೆ. ಒಂದು ವಾರದಲ್ಲಿ ಟೆಂಡರ್ ಕರೆಯಲಾಗುವುದು. ವಿಮಾನ ನಿಲ್ದಾಣ ಪೂರ್ಣಗೊಂಡರೆ ಹೆಚ್ಚಿನ ಹೂಡಿಕೆದಾರರು ಬರುತ್ತಾರೆ. ಹೂಡಿಕೆ ಹರಿದು ಬಂದರೆ ಉದ್ಯೋಗಾವಕಾಶ ಸಿಗುತ್ತದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ, ಶಾಸಕ ಕೆ.ಬಿ.ಅಶೋಕ ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಭದ್ರಪ್ಪ ಪೂಜಾರಿ, ಬಿಜೆಪಿ ಮುಖಂಡರಾದ ಪ್ರವೀಣ್ ಪಟೇಲ್, ಮಂಗೋಟೆ ರುದ್ರೇಶ್, ಪಾಲಿಕೆ ಮಾಜಿ ಸದಸ್ಯ ಮಾಲತೇಶ್, ಮೋಹನ್ ಉಪಸ್ಥಿತರಿದ್ದರು.

Post Comments (+)