ಅರಣ್ಯ ಇಲಾಖೆ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ ಭದ್ರಾವತಿ ಶಾಸಕ

7

ಅರಣ್ಯ ಇಲಾಖೆ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ ಭದ್ರಾವತಿ ಶಾಸಕ

Published:
Updated:

ಬೆಂಗಳೂರು: ‘ಅವನ್ಯಾವನು ಅವನು ಕೂಡ್ಲಿಗೆರೆ ಫಾರೆಸ್ಟರ್ ದಿನೇಶ. ತಲಪ್ರತಿಷ್ಠೆ ಮಾಡ್ತಾನೆ. ಹೋಗಿ ಕಾಡು ಕಾಯಿ ಅನ್ರೀ. ಇಲ್ಲಿ ಬಂದು ದೇವಸ್ಥಾನ ಕಟ್ಟೋರಿಗೆ ಅಡ್ಡ ಬರ್ತಾನಂತೆ. ಅವನೇನು ಪಾಳೇಗಾರನಾ? ಒಂದು ಚದರ ದೇವಸ್ಥಾನ ಕಟ್ತಾರೆ. ಅವರ ಸುದ್ದಿಗೆ ಹೋಗಬೇಡ ಅಂತ ಹೇಳು...’

– ಇದು ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಗ್ರಾಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಹತ್ತಾರು ಜನರ ಎದುರು ಆಡಿರುವ ಮಾತು. ಶಾಸಕರ ಮಾತನ್ನು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಮಾತು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಾಸಕರು, ‘ಸಹಜವಾಗಿ ನಾನು ಜನರ ಪರವಾಗಿ ಮಾತನಾಡುವಾಗ ಸಿಟ್ಟಿನಲ್ಲಿ ಆಡಬಾರದ ಮಾತನ್ನು ಅಡಿದೆ. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ.

ಶಾಸಕರ ‘ಆಡಬಾರದ ಮಾತು’ ರಾಜ್ಯದ ಪರಿಸರಾಕ್ತರ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಶಾಸಕರು, ‘ಡಿಸಿಎಫ್‌ಗೂ ಹೇಳಿದ್ದೀವಿ, ಮಾಡ್ಕೊಳಿ ಅಂತ ಹೇಳಿದ್ದಾರೆ. ಊರಿನ ಜನರು ಮಾಡಿಕೊಳ್ತಾರೆ. ಇವತ್ತು ಪೂಜೆ ಮಾಡಿದ್ದೀವಿ. ಮತ್ತೆ ಯಾರೂ ಅಡ್ಡ ಬರಬಾರದು. ಅಡ್ಡ ಯಾವಾನಾದ್ರೂ ಬಂದ್ರೆ ಕೈಯ್ಯೋ, ಕಾಲೋ ಕಾಲೋ ಕಡಿಸ್ತೀನಿ ಅಷ್ಟೇ. ಒಳ್ಳೇ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ ನಿಮಗೆ’ ಎಂದು ಆವಾಜ್ ಹಾಕಿರುವುದು ದಾಖಲಾಗಿದೆ.

ಶಾಸಕರ ವರ್ತನೆಯು, ‘ಮೇಲಧಿಕಾರಿಗಳನ್ನು ಬೆದರಿಸಿಯೋ, ಪ್ರಲೋಭನೆಯಿಂದಲೋ ತಮ್ಮತ್ತ ಒಲಿಸಿಕೊಂಡು ಬಿಟ್ಟರೆ ಅಧೀನ ಸಿಬ್ಬಂದಿಯ ಮೇಲೆ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು. ಕಾಡಿನ ಸಂಪನ್ಮೂಲ ಮತ್ತು ಅರಣ್ಯ ಇಲಾಖೆಯ ಭೂಮಿಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು’ ಎನ್ನುವ ಜನಜನಿತ ಅಭಿಪ್ರಾಯಕ್ಕೆ ಪುಷ್ಟಿಕೊಡುವಂತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

‘ಆ ಜಾಗ ಮೊದಲು ಅರಣ್ಯ ಇಲಾಖೆಗೆ ಸೇರಿತ್ತು. ಈಗ ಕಂದಾಯ ಇಲಾಖೆಗೆ ವರ್ಗಾವಣೆಯಾಗಿದೆ. ಅಲ್ಲಿ ಒಂದಿಷ್ಟು ಜಾಗದಲ್ಲಿ ದೇವಾಲಯ ನಿರ್ಮಾಣ ಕಾಮಗಾರಿ ನಡೆದಿದೆ. ಇದಕ್ಕೆ ಅರಣ್ಯ ಇಲಾಖೆಯ ಕೆಲವರು ಅಡ್ಡಿ ಮಾಡುತ್ತಿದ್ದರು’ ಎಂದು ಶಾಸಕರು ‘ಪ್ರಜಾವಾಣಿ’ಗೆ ನೀಡಿರುವ ಸ್ಪಷ್ಟನೆಯಲ್ಲಿ ಹೇಳಿದ್ದರು.

‘ಅರಣ್ಯ ಇಲಾಖೆ ಸಿಬ್ಬಂದಿ ಕಾನೂನು ಉಲ್ಲಂಘಿಸಿ ಹೇಗೆ ಅಡ್ಡಿಯುಂಟು ಮಾಡಲು ಸಾಧ್ಯ? ದೇವಸ್ಥಾನವೋ ಅಥವಾ ಮತ್ಯಾವುದೋ ನೆಪದಲ್ಲಿ ಭೂಕಬಳಿಕೆಯನ್ನು ತಡೆಯುವ ಮೂಲಕ ಸರ್ಕಾರದ ಆಸ್ತಿ ಉಳಿಸಲು ಯತ್ನಿಸಿದ ಸರ್ಕಾರಿ ನೌಕರನ ಮೇಲೆ ಜನಪ್ರತಿನಿಧಿಯೊಬ್ಬ ಹೀಗೆ ಹರಿಹಾಯಬಹುದೇ’ ಎಂದು ಹಲವರು ಪ್ರಶ್ನಿಸಿದ್ದಾರೆ.

ಶಾಸಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ: ಸಂಜಯ್‌ಗುಬ್ಬಿ

ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ, ನಿಂದನೆ ಹೆಚ್ಚುತ್ತಿದೆ. ರಾಜ್ಯದ ಅರಣ್ಯ, ನದಿಗಳ ಜಲಾನಯನ ಪ್ರದೇಶ, ನದಿಮೂಲಗಳು, ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿರುವವರ ಮೇಲಿನ ದೌರ್ಜನ್ಯ ಖಂಡನೀಯ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ಗುಬ್ಬಿ ಪ್ರತಿಕ್ರಿಯಿಸಿದ್ದಾರೆ.

ಡಿ.30ರಂದು ಭದ್ರಾವತಿ ವಲಯದ ಕೂಡ್ಲಿಗೆರೆ ವಿಭಾಗದಲ್ಲಿ ಲಿಖಿತ ಅನುಮತಿಯಿಲ್ಲದೆ ನಡೆಯುತ್ತಿದ್ದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಉಪ ವಲಯಾಧಿಕಾರಿ ಟಿ.ದಿನೇಶ್ ಯತ್ನಿಸಿದ್ದರು. ಇದೇ ಕಾರಣಕ್ಕೆ ಭದ್ರಾವತಿಯ ಮಾನ್ಯ ವಿಧಾನಸಭಾ ಸದಸ್ಯರು ‘ಕೈಯೊ ಕಾಲೊ ಕಡಿಸುತ್ತೇನೆ’ ಎಂದು ಅರಣ್ಯಾಧಿಕಾರಿಯ ಬಗ್ಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದು ಪ್ರಜಾತಂತ್ರದ ಮೇಲೆ ಮಾಡಿರುವ ಹಲ್ಲೆ ಮತ್ತು ಬಹು ಹೀನಾಯ ಹೇಳಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಕರ್ತವ್ಯ ಮತ್ತು ಕಾನೂನು ಪಾಲನೆ ಮಾಡಲು ಹೋಗಿದ್ದ ಅಧಿಕಾರಿಯ ಮೇಲೆ ಹೀಗೆ ಹೇಳುವುದನ್ನು ಎಲ್ಲರೂ ವಿರೋಧಿಸಲೇಬೇಕು. ಅರಣ್ಯ ಇಲಾಖೆ ಅಧಿಕಾರಿಯ ಮೇಲೆ ಆಕ್ಷೇಪಣೆಯಿದ್ದರೆ ಅಥವಾ ಕಾನೂನಿನ ವಿರುದ್ಧ ಕ್ರಮ ಕೈಗೊಂಡಿದ್ದರೆ ಅದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೇ ಹೊರತು ಈ ತರಹದ ಹೇಳಿಕೆಗಳು ಆಕ್ಷೇಪಣೀಯ ಮತ್ತು ಪ್ರಜಾತಂತ್ರದಲ್ಲಿ ಇದಕ್ಕೆ ಅವಕಾಶವಿಲ್ಲ. ವಿಧಾನಸಭಾ ಸದಸ್ಯರೇ ಹೀಗೆ ಕಾನೂನನ್ನು ಧಿಕ್ಕರಿಸಿ ಸಾರ್ವಜನಿಕವಾಗಿ ಅಮಾನವೀಯ ಹೇಳಿಕೆ ಕೊಟ್ಟರೆ ಕಾನೂನಿನ ರಕ್ಷಣೆ ಮತ್ತು ಸಾಂಸ್ಕೃತಿಕ ಸಮಾಜವನ್ನು ಕಾಪಾಡುವುದು ಬಹುಕಷ್ಟ. ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಭಾಪತಿಗಳು ಈ ವಿಚಾರವನ್ನು ಖಂಡಿಸಬೇಕು ಮತ್ತು ಕಾನೂನುರೀತ್ಯಾ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 8

  Angry

Comments:

0 comments

Write the first review for this !